ADVERTISEMENT

ತುಲಾಭಾರ ಅವಘಡ: ತನಿಖೆಗೆ ಅಭ್ಯರ್ಥಿ ಶಶಿ ತರೂರ್‌ ಆಗ್ರಹ

ತಲೆಗೆ ಗಾಯ: ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಬಿಡುಗಡೆ

ಪಿಟಿಐ
Published 9 ಮೇ 2019, 17:52 IST
Last Updated 9 ಮೇ 2019, 17:52 IST
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅವರ ಆರೋಗ್ಯ ವಿಚಾರಿಸಿದರು
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅವರ ಆರೋಗ್ಯ ವಿಚಾರಿಸಿದರು   

ತಿರುವನಂತಪುರ: ‘ಇಲ್ಲಿನ ದೇವಸ್ಥಾನವೊಂದರಲ್ಲಿ ತುಲಾಭಾರ ಸಂದರ್ಭದಲ್ಲಿ ಕೊಂಡಿ ಕಳಚಿ ಬಿದ್ದು ನನಗೆ ಗಾಯವಾದ ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬೇಕು’ ಎಂದು ತಿರುವನಂತಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಶಿ ತರೂರ್‌ ಆಗ್ರಹಿಸಿದ್ದಾರೆ.

ತಿರುವನಂತಪುರ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆಯಾದ ನಂತರ ಅವರು ಮಾತನಾಡಿದರು.

‘ಇಂತಹ ಘಟನೆಗಳ ಬಗ್ಗೆ ಕೇಳಿಲ್ಲ. ನನ್ನ ತಾಯಿಗೆ ಈಗ 80 ವರ್ಷ. ತಮ್ಮ ಅನುಭವನದಲ್ಲಿ ಸಹ ಇಂತಹ ಘಟನೆ ಬಗ್ಗೆ ಕೇಳಿಲ್ಲ ಎಂದೂ ಅವರು ಹೇಳಿದರು. ಹೀಗಾಗಿ ಸಂಶಯವನ್ನು ನಿವಾರಿಸುವ ದೃಷ್ಟಿಯಿಂದ ಈ ಘಟನೆ ಬಗ್ಗೆ ತನಿಖೆ ನಡೆಸಬೇಕು’ ಎಂದು ಪ್ರತಿಪಾದಿಸಿದರು.

ADVERTISEMENT

ಸೋಮವಾರ ಮಲಯಾಳ ಹೊಸ ವರ್ಷಾಚರಣೆ (ವಿಶು ಹಬ್ಬ) ಅಂಗವಾಗಿ ಸಕ್ಕರೆ ಬಳಸಿ ತರೂರ್‌ ಅವರ ತುಲಾಭಾರ ನೆರ
ವೇರಿಸುವ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮದ ನಂತರ ಅವರು ಚುನಾವಣಾ ಪ್ರಚಾರಕ್ಕೆ ತೆರಳುವವರಿದ್ದರು. ಆದರೆ, ತುಲಾಭಾರ ಸಂದರ್ಭದಲ್ಲಿ, ತಕ್ಕಡಿಯ ಕೊಂಡಿ ಕಳಚಿ ಬಿದ್ದ ಪರಿಣಾಮ ತರೂರ್‌ ತಲೆಗೆ ಪೆಟ್ಟಾಗಿತ್ತು.

ಆರೋಗ್ಯ ವಿಚಾರಣೆ: ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಶಶಿ ತರೂರ್‌ ಅವರ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ನಂತರ ಟ್ವೀಟ್‌ ಮಾಡಿದ ಕಾಂಗ್ರೆಸ್‌ ಮುಖಂಡ ತರೂರ್‌, ‘ತಮ್ಮ ಬಿಡುವಿಲ್ಲದ ಚುನಾವಣಾ ಪ್ರಚಾರ ಕಾರ್ಯದ ನಡು
ವೆಯೂ ನಿರ್ಮಲಾ ಸೀತಾರಾಮನ್‌ ಆಸ್ಪತ್ರೆಗೆ ಭೇಟಿ, ನನ್ನ ಆರೋಗ್ಯ ವಿಚಾರಿಸಿದರು. ಭಾರತದ ರಾಜಕಾರಣದಲ್ಲಿ ಇಂತಹ ಸೌಜನ್ಯ ಅಪರೂಪವೇ ಸರಿ’ ಎಂದು ಕೊಂಡಾಡಿದ್ದಾರೆ.

ಸಿಪಿಐ ಮುಖಂಡ ಹಾಗೂ ಎಲ್‌ಡಿಎಫ್‌ ಅಭ್ಯರ್ಥಿ ಸಿ.ದಿವಾಕರನ್‌ ಸಹ ಆಸ್ಪತ್ರೆಗೆ ಭೇಟಿ ತರೂರ್‌ ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.