ADVERTISEMENT

ಉತ್ತರ ಪ್ರದೇಶದ ವಸತಿ ನಿಲಯದಲ್ಲಿ ದೌರ್ಜನ್ಯ ಪ್ರಕರಣ: 24 ಬಾಲಕಿಯರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2018, 11:28 IST
Last Updated 6 ಆಗಸ್ಟ್ 2018, 11:28 IST
ಕೃಪೆ: ಟ್ವಿಟರ್
ಕೃಪೆ: ಟ್ವಿಟರ್   

ದೆವ್‍ರಿಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ದೆವ್‍ರಿಯಾ ಜಿಲ್ಲೆಯಲ್ಲಿರುವ ಬಾಲಕಿಯರ ವಸತಿ ನಿಲಯದಲ್ಲಿ ಲೈಂಗಿಕ ಕಿರುಕುಳ ಮತ್ತು ದೈಹಿಕ ಹಿಂಸೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.ಈ ಹಿನ್ನೆಲೆಯಲ್ಲಿ ವಸತಿ ನಿಲಯದಲ್ಲಿ ವಾಸವಾಗಿದ್ದ 24 ಬಾಲಕಿಯರನ್ನು ಪೊಲೀಸರು ರಕ್ಷಿಸಿದ್ದಾರೆ.ಇಲ್ಲಿ ವಾಸವಾಗಿದ್ದ ಎಂಟು ಬಾಲಕಿಯರು ನಾಪತ್ತೆಯಾಗಿದ್ದು, ವಸತಿ ನಿಲಯ ನಡೆಸುತ್ತಿದ್ದ ದಂಪತಿಗಳನ್ನು ಸೋಮವಾರ ಬಂಧಿಸಲಾಗಿದೆ.

ಏನಿದು ಪ್ರಕರಣ?
ಈ ವಸತಿ ನಿಲಯಕ್ಕೆ ಕೆಂಪು, ಬಿಳಿ, ಕಪ್ಪು ಕಾರಿನಲ್ಲಿ ಬರುವ ಜನರು ರಾತ್ರಿ ಹೊತ್ತು ಇಲ್ಲಿನ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ಬೆಳಗ್ಗೆ ವಾಪಸ್ ಕರೆದುಕೊಂಡು ಬರುತ್ತಾರೆ ಎಂದು ವಸತಿ ನಿಲಯದಿಂದ ತಪ್ಪಿಸಿಕೊಂಡು ಬಂದ 10ರ ಹರೆಯದ ಬಾಲಕಿ ಪೊಲೀಸರಲ್ಲಿ ಹೇಳಿದ್ದಳು.

ಕಳೆದ ರಾತ್ರಿ ಪೊಲೀಸರು ಈ ವಸತಿ ನಿಲಯದ ಮೇಲೆ ದಾಳಿ ನಡೆಸಿದ್ದು, ವಸತಿ ನಿಲಯ ನಡೆಸುತ್ತಿದ್ದ ಗಿರಿಜಾ ತ್ರಿಪಾಠಿ, ಆಕೆಯ ಪತಿ ಮೋಹನ್ ತ್ರಿಪಾಠಿ ಮತ್ತು ಅವರ ಮಗಳನ್ನು ಬಂಧಿಸಿದ್ದರು. ಇದೀಗವಸತಿ ನಿಲಯಕ್ಕೆ ಬೀಗಮುದ್ರೆ ಹಾಕಲಾಗಿದೆ.
ರಕ್ಷಿಸಲಾದ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಅವರ ಹೇಳಿಕೆಗಳನ್ನು ಮೆಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು.ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಮಗೆ ಸಹಕರಿಸುತ್ತಿದ್ದು, ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದುಎಡಿಜಿಪಿ ಆನಂದ್ಕುಮಾರ್ ಹೇಳಿದ್ದಾರೆ.

ADVERTISEMENT

ಎಲ್ಲಿದೆ ಈ ವಸತಿ ನಿಲಯ?
ಲಖನೌನಿಂದ 300 ಕಿಮೀ ದೂರದಲ್ಲಿರುವ ದೆವ್‌ರಿಯಾದಲ್ಲಿ ಈ ಖಾಸಗಿ ವಸತಿ ನಿಲಯವಿದೆ.ಈ ಹಿಂದೆ ಸರ್ಕಾರದಿಂದ ಅನುದಾನ ಪಡೆಯುತ್ತಿದ್ದ ವಸತಿ ನಿಲಯ, ಅದನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.ಈ ಬಗ್ಗೆ ಸಿಬಿಐ ತನಿಖೆ ನಡೆಸಿದ ನಂತರ ವಸತಿ ನಿಲಯದ ಅನುದಾನವನ್ನು 2017ರಲ್ಲಿ ನಿಲ್ಲಿಸಲಾಗಿತ್ತು.

ಆದಾಗ್ಯೂ, ಈ ದಂಪತಿಗಳು ಅನುಮತಿ ಪಡೆಯದೆಯೇ ವಸತಿ ನಿಲಯವನ್ನು ನಡೆಸುತ್ತಿದ್ದರು.ಕಳೆದ ವಾರ ಪೊಲೀಸರು ಇಲ್ಲಿ ಪರಿಶೋಧನೆ ನಡೆಸಲು ಹೋದಾಗ ದಂಪತಿಗಳು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ದಂಪತಿಗಳವಿರುದ್ದ ಎಫ್‍ಐಆರ್ ದಾಖಲಿಸಲಾಗಿದೆ.

ಕಳೆದ ರಾತ್ರಿ ಈ ವಸತಿ ನಿಲಯದಿಂದ ಬಾಲಕಿಯೊಬ್ಬಳು ತಪ್ಪಿಸಿಕೊಂಡು ಬಂದಿದ್ದು, ಸ್ಥಳೀಯರು ಈಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು.ಬಾಲಕಿಯ ಹೇಳಿಕೆ ಪ್ರಕಾರ ಅಲ್ಲಿ 15 ರಿಂದ 18 ವಯಸ್ಸಿನ ಹೆಣ್ಣು ಮಕ್ಕಳು ವಾಸವಾಗಿದ್ದು, ಅವರನ್ನು ಬಲವಂತವಾಗಿ ಲೈಂಗಿಕ ದಂಧೆಗೆ ನೂಕಲಾಗುತ್ತಿದೆ.

ತಪ್ಪಿಸಿಕೊಂಡು ಬಂದ ಬಾಲಕಿ ಕಳೆದ ಮೂರು ವರ್ಷಗಳಿಂದ ಅಲ್ಲಿ ವಾಸವಾಗಿದ್ದಳು.ನನ್ನನ್ನು ಅವರು ಕೆಲಸದಾಳುವಿನಂತೆ ದುಡಿಸಿಕೊಂಡಿದ್ದಾರೆ.ರಾತ್ರಿ ಹೊತ್ತಿನಲ್ಲಿ ಹಲವಾರು ಹೆಣ್ಣು ಮಕ್ಕಳನ್ನು ಕಾರಿನಲ್ಲಿ ಹೊರಗೆ ಕರೆದುಕೊಂಡು ಹೋಗಿ, ಬೆಳಗ್ಗೆ ವಾಪಸ್ ಕರೆ ತರುತ್ತಾರೆ. ಆ ಹೆಣ್ಣು ಮಕ್ಕಳು ದಿನವಿಡೀ ಅಳುತ್ತಾ ಕೂರುತ್ತಾರೆ ಎಂದು ಬಾಲಕಿಹೇಳಿದ್ದಾಳೆ.ಇಲ್ಲಿ ದತ್ತು ಪಡೆಯುವ ಕೆಲಸ ಅಕ್ರಮವಾಗಿ ನಡೆಯುತ್ತದೆ.ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದು, ನಾಪತ್ತೆಯಾಗಿರುವ ಹೆಣ್ಣುಮಕ್ಕಳಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರೋಹನ್ .ಪಿ.ಕನಯ್ ಹೇಳಿದ್ದಾರೆ.

ಈ ವಸತಿ ನಿಲಯ ಕಾನೂನುಬಾಹಿರವಾಗಿದೆ ಎಂದು ಉತ್ತರ ಪ್ರದೇಶದ ಮಹಿಳೆ ಮತ್ತು ಮಕ್ಕಳ ಕಲ್ಯಾಣದ ಸಚಿವೆ ರೀತಾ ಬಹುಗುಣ ಜೋಷಿ ಹೇಳಿದ್ದಾರೆ.ಸಿಬಿಐ ತನಿಖೆ ನಂತರ ವಸತಿ ನಿಲಯಕ್ಕೆ ನೋಟಿಸ್ ಕಳುಹಿಸಿ, ಅನುದಾನವನ್ನು ರದ್ದುಗೊಳಿಸಲಾಗಿತ್ತು. ಈ ಪ್ರಕರಣ ಹೈಕೋರ್ಟ್ ನಲ್ಲಿದೆ.ಎರಡು ವಾರಗಳ ಹಿಂದೆ, ವಸತಿ ನಿಲಯದ ಆಡಳಿತಾಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ, ಅಲ್ಲಿರುವ ಬಾಲಕಿಯರನ್ನು ರಾಜ್ಯ ಸರ್ಕಾರದ ವಸತಿ ನಿಲಯಕ್ಕೆ ಕರೆದೊಯ್ಯಲು ಆದೇಶಿಸಲಾಗಿತ್ತು.ಆ ದಂಪತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ ಜೋಷಿ.

ಬಿಹಾರದ ಮುಜಾಫರ್‍‍ನಗರದಲ್ಲಿರುವ ಬಾಲಕಿಯರ ಸರ್ಕಾರಿ ವಸತಿ ನಿಲಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೆವ್‍ರಿಯಾದ ಜಿಲ್ಲಾ ಮೆಜಿಸ್ಟ್ರೇಟ್ ಸುಜಿತ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ. ವಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿವೆ.

ಏತನ್ಮಧ್ಯೆ, ಪ್ರಕರಣದ ಬಗ್ಗೆ ತನಿಖೆ ನಡೆಸಿ ಸೋಮವಾರ ರಾತ್ರಿಯೊಳಗೆ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.