ADVERTISEMENT

ಅಸ್ಸಾಂ ರೈಫಲ್ಸ್‌ ನಿಯಂತ್ರಣಕ್ಕೆ ಪಡೆಯಲು ಗೃಹ ಸಚಿವಾಲಯ ಪ್ರಸ್ತಾವ: ಸೇನೆ ಆಕ್ಷೇಪ

ಅತಿ ಸೂಕ್ಷ್ಮ ಗಡಿಯಲ್ಲಿ ಗಂಭೀರ ಪರಿಣಾಮದ ಎಚ್ಚರಿಕೆ

ಪಿಟಿಐ
Published 30 ಸೆಪ್ಟೆಂಬರ್ 2019, 2:44 IST
Last Updated 30 ಸೆಪ್ಟೆಂಬರ್ 2019, 2:44 IST
ಅಸ್ಸಾಂ ರೈಫಲ್ಸ್‌
ಅಸ್ಸಾಂ ರೈಫಲ್ಸ್‌   

ನವದೆಹಲಿ: ಅಸ್ಸಾಂ ರೈಫಲ್ಸ್‌ನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಗೃಹ ಸಚಿವಾಲಯದ ಪ್ರಸ್ತಾವಕ್ಕೆ ಭಾರತೀಯ ಸೇನೆ ಆಕ್ಷೇಪ ವ್ಯಕ್ತಪಡಿಸಿದೆ.

ಚೀನಾವು ಗಡಿಯಲ್ಲಿ ಸೇನೆಗೆ ಮೂಲಸೌಕರ್ಯ ಹೆಚ್ಚಿಸುತ್ತಿರುವ ಈ ಸಂದರ್ಭದಲ್ಲಿ ಇಂಥ ಕ್ರಮವುಅತಿ ಸೂಕ್ಷ್ಮ ಗಡಿಯಲ್ಲಿ ಕಣ್ಗಾವಲು ವಹಿಸುವುದರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸೇನೆ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಈ ಪ್ರಸ್ತಾವದಿಂದ ಕಳವಳ ಉಂಟಾಗಿದೆ. ಸುಮಾರು 185 ವರ್ಷಗಳಷ್ಟು ಹಳೆಯದಾದ ಅಸ್ಸಾಂ ರೈಫಲ್ಸ್‌ನ ಕಾರ್ಯಾಚರಣೆಯ ನಿಯಂತ್ರಣವನ್ನು ಗೃಹ ಸಚಿವಾಲಯಕ್ಕೆ ಹಸ್ತಾಂತರಿಸಿದರೆ ಉಂಟಾಗುವ ಸಂಭವನೀಯ ರಾಷ್ಟ್ರೀಯ ಭದ್ರತಾ ಪರಿಣಾಮಗಳನ್ನು ಪರಿಗಣಿಸಬೇಕು. ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ರಕ್ಷಣಾ ಸಚಿವಾಲಯವನ್ನು ಒತ್ತಾಯಿಸಲಾಗಿದೆ’ ಎಂದು ಸೇನೆಯ ಮೂಲಗಳು ತಿಳಿಸಿವೆ.

ಇಂಡೋ–ಟಿಬೆಟಿಯನ್‌ ಗಡಿ ಪೊಲೀಸ್‌ (ಐಟಿಬಿಪಿ) ಜತೆಗೆ ಅಸ್ಸಾಂ ರೈಫಲ್ಸ್‌ ವಿಲೀನಗೊಳಿಸಲು ಉದ್ದೇಶಿಸಿರುವ ಗೃಹ ಸಚಿವಾಲಯದ ಪ್ರಸ್ತಾವವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ (ಸಿಸಿಎಸ್‌) ಪರಿಶೀಲಿಸಲಿದೆ.

‘ಸೇನೆಯ ನಿಯಂತ್ರಣದಲ್ಲಿರುವ ಅಸ್ಸಾಂ ರೈಫಲ್ಸ್‌ನ ಕಾರ್ಯಾಚರಣೆ ನಿಯಂತ್ರಣವನ್ನು ಗೃಹ ಸಚಿವಾಲಯಕ್ಕೆ ವರ್ಗಾಯಿಸಿದರೆ ಚೀನಾ ಜತೆಗಿನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ಕಣ್ಗಾವಲು ವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸಿದಂತಾಗುತ್ತದೆ’ ಎಂದು ಉನ್ನತಮಟ್ಟದ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.