ಮುಂಬೈ: ಸುಳ್ಳು ಪ್ರಕರಣಗಳನ್ನು ದಾಖಲಿಸಲು ಕೇಂದ್ರದ ತನಿಖಾ ಸಂಸ್ಥೆಗಳಿಗೆ ಬಿಜೆಪಿ ತರಬೇತಿ ನೀಡುತ್ತಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಬುಧವಾರ ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಯಾರ ಮೇಲೂ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿಲ್ಲ. ಸುಳ್ಳು ಪ್ರಕರಣಗಳನ್ನು ದಾಖಲಿಸಲು ಮತ್ತು ಸೃಷ್ಟಿಸಲು ಕೇಂದ್ರದ ಎನ್‌ಸಿಬಿ, ಸಿಬಿಐ ಹಾಗೂ ಇ.ಡಿ.ಯಂತಹ ಸಂಸ್ಥೆಗಳಿಗೆ ಬಿಜೆಪಿ ತರಬೇತಿ ನೀಡುತ್ತಿದೆ. ಆದರೆ ಮಹಾರಾಷ್ಟ್ರ ಪೊಲೀಸರಿಗೆ ಇಂಥ ತರಬೇತಿ ನೀಡಲಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಬಿಜೆಪಿ ನಾಯಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವಂತೆ ಮಾಡುತ್ತಿದೆ ಎಂದು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ದೂರಿದ್ದರು. ಇದಕ್ಕೆ ರಾವುತ್ ತಿರುಗೇಟು ನೀಡಿದ್ದು, ಫಡಣವೀಸ್ ತುಸು ತಾಳ್ಮೆ ವಹಿಸುವುದು ಒಳ್ಳೆಯದು. ಅವರ ಹೇಳಿಕೆಗಳು ರಾಜ್ಯ ಪೊಲೀಸರನ್ನು ಕೆಣಕುವಂತಿವೆ ಎಂದು ಹೇಳಿರುವುದಾಗಿ ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
ಮಹಾರಾಷ್ಟ್ರ ಸಚಿವರಾದ ಆದಿತ್ಯ ಠಾಕ್ರೆ ಹಾಗೂ ಅನಿಲ್ ಪರಬ್ ಅವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದರು. ಆದಿತ್ಯ ಠಾಕ್ರೆ ಹಾಗೂ ಅನಿಲ್ ಪರಬ್ ಆಪ್ತರು ಮುಂಬೈ, ಪುಣೆಗಳಲ್ಲಿ ಹೊಂದಿರುವ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿತ್ತು. ಇದರ ಬೆನ್ನಲ್ಲೇ ಸಂಜಯ್ ರಾವುತ್ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
‘ಜಾರಿ ನಿರ್ದೇಶನಾಲಯವು (ಇ.ಡಿ) ಬಿಜೆಪಿಯ ಎಟಿಎಂನಂತಾಗಿದೆ. ಅದರಲ್ಲಿನ ಕೆಲ ಅಧಿಕಾರಿಗಳು ಬಿಜೆಪಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ’ ಎಂದು ರಾವುತ್ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.