ಂಬೈ
ಮುಂಬೈ: ಕೊಠಡಿಯೊಂದರಲ್ಲಿ ಅರ್ಧ ತೆರೆದಿರುವ ಚೀಲ ಇಟ್ಟುಕೊಂಡು ಮಹಾರಾಷ್ಟ್ರದ ಸಚಿವ ಸಂಜಯ್ ಶಿರ್ಸಾಟ್ ಕುಳಿತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅದು ದುಡ್ಡಿನ ಚೀಲ ಎಂಬ ವದಂತಿ ಹಬ್ಬಿದೆ. ಆದರೆ, ಅರ್ಧ ತೆರೆದಿರು ಚೀಲದಲ್ಲಿ ಬಟ್ಟೆಗಳು ಮಾತ್ರ ಕಾಣುತ್ತಿವೆ.
ಈ ವಿಡಿಯೊವನ್ನು ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಿವಸೇನಾ(ಯುಬಿಟಿ) ಸಂಸದ ಸಂಜಯ್ ರಾವುತ್, ಕ್ರಮ ಕೈಗೊಳ್ಳುವಂತೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.
ಇದನ್ನು ತಳ್ಳಿ ಹಾಕಿರುವ ಶಿವಸೇನಾ ಪಕ್ಷದ ಸಚಿವ, ಅದರಲ್ಲಿ ಕೇವಲ ಬಟ್ಟೆಗಳಿದ್ದವು ಎಂದು ಸಮಜಾಯಿಷಿ ನೀಡಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರನ್ನು ಕಂಡರೆ ನನಗೆ ಕನಿಕರವಾಗುತ್ತಿದೆ. ಅವರು ಇನ್ನೂ ಎಷ್ಟು ಬಾರಿ ತಮ್ಮ ಘನತೆ ಹಾಳಾಗುವುದನ್ನು ನೋಡುತ್ತಾ ಕುಳಿತುಕೊಳ್ಳುತ್ತಾರೆ? ಅಸಹಾಯಕತೆಗೆ ಇನ್ನೊಂದು ಹೆಸರೇ ಫಡಣವೀಸ್! ಎಂದು ಎಕ್ಸ್ ಪೋಸ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಕುರಿತಂತೆ ಮುಂಬೈನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಶಿರ್ಸಾಟ್, ‘ವಿಡಿಯೊದಲ್ಲಿ ಕಾಣುವ ಮನೆ ನನ್ನದೇ. ನಾನು ನನ್ನ ಮಲಗುವ ಕೋಣೆಯಲ್ಲಿ ಕುಳಿತಿರುವ ವಿಡಿಯೊ ಅದು. ನನ್ನ ಸಾಕು ನಾಯಿ ಮತ್ತು ನನ್ನ ಬ್ಯಾಗ್ ಅನ್ನು ಸಹ ನೋಡಬಹುದು. ಇದರರ್ಥ, ನಾನು ಪ್ರಯಾಣ ಮುಗಿಸಿ ಮನೆಗೆ ಬಂದು ಬಟ್ಟೆ ಬದಲಿಸಿರುವುದು. ಒಂದೊಮ್ಮೆ ಅದು ಹಣದ ಬ್ಯಾಗೇ ಆಗಿದ್ದರೆ, ಅದನ್ನು ಕಪಾಟಿನಲ್ಲಿ ಇಡುತ್ತಿದ್ದೆ. ಪಕ್ಕದಲ್ಲೇಕೆ ಇಟ್ಟುಕೊಳ್ಳುತ್ತಿದ್ದೆ’ ಎಂದಿದ್ದಾರೆ.
’ಅವರು(ಸಂಜಯ್ ರಾವುತ್) ಬಟ್ಟೆಯ ಚೀಲದಲ್ಲಿಯೂ ಹಣದ ನೋಟುಗಳನ್ನು ನೋಡುತ್ತಾರೆ. ಹಣ ಇದ್ದಿದ್ದರೆ, ನಾನು ಅದನ್ನು ಕಪಾಟಿನಲ್ಲಿ ಇಡುತ್ತಿದ್ದೆ. ಅದರಲ್ಲಿ ಇದ್ದದ್ದು ಬಟ್ಟೆಗಳು ಮಾತ್ರ’ಎಂದು ಅವರು ಹೇಳಿದ್ದಾರೆ.
‘ಈ ರೀತಿಯ ಹೇಳಿಕೆಗಳಿಂದ ನನ್ನ ರಾಜಕೀಯ ವೃತ್ತಿಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ಎಂದಿದ್ದಾರೆ.
ಶಿರ್ಸಾಟ್ ಅವರ ಘೋಷಿತ ಆಸ್ತಿಯಲ್ಲಿ ಗಣನೀಯ ಏರಿಕೆಯಾಗಿದ್ದು, 2019ರಲ್ಲಿ ₹3.3 ಕೋಟಿ ಗಳಷ್ಟಿದ್ದ ಆಸ್ತಿ ಮೌಲ್ಯ 2024ರಲ್ಲಿ ₹35 ಕೋಟಿಗೆ ಏರಿಕೆಯಾಗಿದೆ ಎಂಬ ವರದಿಗಳು ಬಂದ ಒಂದು ದಿನದ ನಂತರ ಈ ವಿಡಿಯೊ ಬಹಿರಂಗವಾಗಿದೆ.
2019 ಮತ್ತು 2024ರ ವಿಧಾನಸಭಾ ಚುನಾವಣೆಗಳ ನಡುವೆ ಅವರ ಆಸ್ತಿಯ ಮೌಲ್ಯದಲ್ಲಿ ಗಮನಾರ್ಹ ಹೆಚ್ಚಳ ಕುರಿತಂತೆ ಐಟಿ ಇಲಾಖೆ ವಿವರಣೆ ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.