ADVERTISEMENT

ರೈಲಿನಲ್ಲಿ ಶಾಪಿಂಗ್‌ ಮಾಡಬಹುದು!

ಪಿಟಿಐ
Published 20 ಡಿಸೆಂಬರ್ 2018, 20:20 IST
Last Updated 20 ಡಿಸೆಂಬರ್ 2018, 20:20 IST

ನವದೆಹಲಿ: ಕೆಲ ವಿಮಾನಗಳಲ್ಲಿ ಇರುವಂತೆ ಆಯ್ದ ರೈಲುಗಳಲ್ಲಿ ಪ್ರಯಾಣಿಕರು ಇನ್ನು ಮುಂದೆ ಶಾಪಿಂಗ್‌ ಮಾಡಬಹುದು! ಸೌಂದರ್ಯ ಉತ್ಪನ್ನ, ಫಿಟ್‌ನೆಸ್ ಉಪಕರಣ, ಗೃಹೋಪಯೋಗಿ ವಸ್ತು ಮತ್ತು ಅಡುಗೆ ಸಲಕರಣೆಗಳು ಜನವರಿಯಿಂದ ಇಲ್ಲಿ ಅವರಿಗೆ ಸಿಗಲಿವೆ.

ಪಶ್ಚಿಮ ರೈಲ್ವೆಯ ಮುಂಬೈ ವಿಭಾಗದ 16 ಮೇಲ್ ಮತ್ತು ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇವುಗಳ ಮಾರಾಟಕ್ಕೆ ಪರವಾನಗಿ ಪಡೆದಿರುವ ವ್ಯಕ್ತಿಗಳಿಗೆ ಐದು ವರ್ಷಗಳ ಅವಧಿಗೆ ₹ 3.5 ಕೋಟಿಗೆ ಗುತ್ತಿಗೆ ನೀಡಲಾಗಿದೆ. ತಿನಿಸು, ಸಿಗರೇಟ್, ಗುಟ್ಕಾ ಅಥವಾ ಮದ್ಯಪಾನ ಮಾರಾಟಕ್ಕೆ ಅವಕಾಶ ಇಲ್ಲ ಎಂಬ ಷರತ್ತು ವಿಧಿಸಲಾಗಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಉತ್ಪನ್ನಗಳನ್ನು ಬೆಳಿಗ್ಗೆ 8ರಿಂದ ರಾತ್ರಿ 9ರವರೆಗಿನ ಅವಧಿಯಲ್ಲಿ, ಇಬ್ಬರು ಸಮವಸ್ತ್ರಧಾರಿಗಳು ಸಣ್ಣ ತಳ್ಳುಗಾಡಿಗಳಲ್ಲಿ ಪ್ರಯಾಣಿಕರ ಬಳಿ ಹೊತ್ತು ತರಲಿದ್ದಾರೆ. ಪ್ರಯಾಣಿಕರು ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ ಬಳಸಿ ಅವುಗಳನ್ನು ಖರೀದಿಸಬಹುದು. ಯಾವ್ಯಾವ ವಸ್ತುಗಳಿವೆ ಎಂಬ ಕ್ಯಾಟಲಾಗ್‌ ಅನ್ನು ಗಾಡಿ ಬರುವುದಕ್ಕೆ ಮೊದಲೇ ವಿತರಿಸಲಾಗಿರುತ್ತದೆ. ಆದರೆ, ವಸ್ತುಗಳನ್ನು ಪ್ರಚುರ‍ಪಡಿಸಲು ಜೋರಾಗಿ ಕೂಗುವುದನ್ನು ನಿಷೇಧಿಸಲಾಗಿದೆ.

ADVERTISEMENT

ಮೊದಲ ಹಂತದಲ್ಲಿ ಎರಡು ರೈಲುಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಿ, ನಂತರದ ಹಂತಗಳಲ್ಲಿ ಎರಡೆರಡು ರೈಲುಗಳಿಗೆ ಅದನ್ನು ವಿಸ್ತರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.