ಇಂಫಾಲ/ಚುರ್‌ಚಂದಪುರ: ಮಣಿಪುರ ಜನಾಂಗೀಯ ಸಂಘರ್ಷಕ್ಕೆ ಇಂದಿಗೆ ಎರಡು ವರ್ಷ ತುಂಬಿದೆ. ಸಂಘರ್ಷದಲ್ಲಿ ಮಡಿದವರಿಗೆ ಶೋಕ ವ್ಯಕ್ತಪಡಿಸಿ ವಿವಿಧ ಸಂಘಟನೆಗಳು ಶನಿವಾರ ಮಣಿಪುರ ಬಂದ್‌ಗೆ ಕರೆ ನೀಡಿವೆ. ಇದರಿಂದ ಮೈತೇಯಿ ನಿಯಂತ್ರಿತ ಇಂಫಾಲ ಕಣಿವೆ ಮತ್ತು ಕುಕಿ ಪ್ರಾಬಲ್ಯದ ಬೆಟ್ಟದ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಮೈತೇಯಿ ಗುಂಪಿನ ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ (COCOMI) ಕಣಿವೆಯ ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ನೀಡಿದ್ದರೆ, ಜೋಮಿ ವಿದ್ಯಾರ್ಥಿ ಒಕ್ಕೂಟ (ZSF) ಮತ್ತು ಕುಕಿ ವಿದ್ಯಾರ್ಥಿ ಸಂಘಟನೆ (KSO) ಬೆಟ್ಟದ ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ನೀಡಿವೆ.
2023ರಲ್ಲಿ ಈ ದಿನದಂದು ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆ ಭುಗಿಲೆದ್ದಿತ್ತು. ಸಂಘರ್ಷದಲ್ಲಿ 260ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 1,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 70 ಸಾವಿರಕ್ಕೂ ಹೆಚ್ಚು ಜನ ಸ್ಥಳಾಂತರಗೊಂಡಿದ್ದಾರೆ.
ಬಂದ್ ಹಿನ್ನೆಲೆ ರಾಜ್ಯದಾದ್ಯಂತ ಶಾಲಾ–ಕಾಲೇಜುಗಳು, ಕಚೇರಿಗಳು, ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ. ಸರ್ಕಾರಿ ವಾಹನಗಳು ರಸ್ತೆಗಿಳಿದಿಲ್ಲ. ಕೆಲವು ಖಾಸಗಿ ವಾಹನಗಳು ಮಾತ್ರ ರಸ್ತೆಗಳಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪ್ರಮುಖ ಸ್ಥಳಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಫಾಲ್‌ನ ಖುಮಾನ್ ಲ್ಯಾಂಪಕ್ ಕ್ರೀಡಾಂಗಣದಲ್ಲಿ ಸಮಾವೇಶವನ್ನು ಆಯೋಜಿಸಲಿದ್ದು, ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮೈತೇಯಿ ಗುಂಪಿನ ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ ಜನರಲ್ಲಿ ಮನವಿ ಮಾಡಿದೆ.
ಹಿಂಸಾಚಾರದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಂಫಾಲ್‌ನಲ್ಲಿ ಸಂಜೆ ಮೊಂಬತ್ತಿ ಮೆರವಣಿಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.