ಶ್ರೀನಗರ/ಜಮ್ಮು: ‘ಇದಾಗಬಾರದಿತ್ತು... ಕಾಶ್ಮೀರದ ಹೆಸರಿನಲ್ಲೂ ಇಸ್ಲಾಂನ ಹೆಸರಿನಲ್ಲೂ ಇದು ನಡೆಯಬಾರದಿತ್ತು. ಮುಗ್ಧ ಜನರನ್ನು ಹತ್ಯೆ ಮಾಡುವುದು ಎಂದರೆ ಇಡೀಯ ಮಾನವತೆಯನ್ನೇ ಹತ್ಯೆ ಮಾಡಿದಂತೆ ಎಂದು ಇಸ್ಲಾಂ ಹೇಳುತ್ತದೆ. ಮನುಷ್ಯನ ಜೀವವನ್ನು ಗೌರವಿಸು ಎಂದು ಇಸ್ಲಾಂ ಹೇಳುತ್ತದೆ...’
– ಹೀಗೆಂದವರು ಶ್ರೀನಗರ ನಿವಾಸಿ ಹಾಜಿ ಬಶೀರ್ ಅಹಮ್ಮದ್ ದಾರ್.
ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಸುಮಾರು 35 ವರ್ಷಗಳ ಇತಿಹಾಸದಲ್ಲಿ ಕಾಶ್ಮೀರದಲ್ಲಿ ಬಂದ್ ನಡೆದಿರಲಿಲ್ಲ. ಹಿಂದೂ ಮುಸ್ಲಿಂ ಭೇದವಿಲ್ಲದೆಯೇ ಎಲ್ಲ ಧರ್ಮದ ಜನರು, ಮುಸ್ಲಿಂ ಧಾರ್ಮಿಕ ಸಂಘಟನೆಗಳು ಸೇರಿ ಎಲ್ಲ ಧಾರ್ಮಿಕ ಸಂಘಟನೆಗಳು, ರಾಷ್ಟ್ರ ಹಾಗೂ ಕಾಶ್ಮೀರದಲ್ಲಿ ಪ್ರಾದೇಶಿಕವಾಗಿರುವ ಎಲ್ಲ ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು ಬುಧವಾರ ಕಾಶ್ಮೀರದ ತುಂಬೆಲ್ಲಾ ಬೀದಿಗಿಳಿದಿದ್ದರು.
ಕಾಶ್ಮೀರ ಮಾತ್ರವಲ್ಲದೆ ಜಮ್ಮುವಿನಲ್ಲೂ ಬಂದ್ ಆಚರಿಸಲಾಯಿತು. ಪ್ರತಿಭಟನೆಗಳೂ ನಡೆದವು. ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಪಾಕಿಸ್ತಾನದ ಧ್ವಜವನ್ನೂ ಸುಡಲಾಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಖಾಸಗಿ ಶಾಲೆಗಳನ್ನು ಮುಚ್ಚಲಾಗಿತ್ತು. ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರವೇ ತೆರೆದಿದ್ದವು. ಕಾಶ್ಮೀರದ ಬೀದಿ ಬೀದಿಗಳಲ್ಲಿ ಸಾರ್ವಜನಿಕರು ಮೊಂಬತ್ತಿ ಹಿಡಿದು, ದಾಳಿಯನ್ನು ಖಂಡಿಸಿ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿದರು.
‘ಭಯೋತ್ಪಾದನೆಯನ್ನು ಬುಡಮೇಲು ಮಾಡಲು ಶೀಘ್ರವಾಗಿ ಕ್ರಮಕೈಗೊಳ್ಳಬೇಕು. ಇಂಥ ಘಟನೆಗಳು ಮತ್ತೆಂದೂ ಜರುಗಬಾರದು. ಕಾಶ್ಮೀರದ ಜನರು ಯಾವತ್ತಿಗೂ ಭಯೋತ್ಪಾದನೆಯ ವಿರುದ್ಧ ಇದ್ದವರು. ಆದರೂ ಕಾಶ್ಮೀರದ ಜನರ ವಿರುದ್ಧ ಪಿತೂರಿಗಳು ನಡೆಯುತ್ತಿವೆ. ಇಲ್ಲಿನ ಆರ್ಥಿಕತೆಯನ್ನು ಹಾಳು ಮಾಡುವುದೇ ಇದರ ಉದ್ದೇಶ’ ಎಂದು ಹಣ್ಣುಗಳ ಅಂಗಡಿ ಇಟ್ಟುಕೊಂಡಿರುವ ಜಿ.ಎಂ. ಬಂಡೆ ಅಭಿಪ್ರಾಯಪಟ್ಟರು.
ಭಯೋತ್ಪಾದನಾ ನೆಲೆಯನ್ನು ಧ್ವಂಸಗೊಳಿಸಲು ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿ. ಭಯೋತ್ಪಾದಕರು ಮತ್ತು ಜಮ್ಮು–ಕಾಶ್ಮೀರದಲ್ಲಿರುವ ಅವರ ಬೆಂಬಲಿಗರು ಇಲ್ಲಿಂದ ತೊಲಗಬೇಕುಯದುವೀರ್ ಸೇಥಿ ಬಿಜೆಪಿ ನಾಯಕ ಜಮ್ಮು
ಹತ್ಯೆಗೆ ಪ್ರತೀಕಾರ ಬೇಕು. ಭದ್ರತಾ ಪಡೆಗಳು ಹತ್ಯೆಗಳಿಗೆ ಸೇಡು ತೀರಿಸಿಕೊಳ್ಳಬೇಕುರಾಜೇಶ್ ಗುಪ್ತಾ ಬಿಜೆಪಿ ನಾಯಕ ಜಮ್ಮು
1947ರಿಂದ ಆಗೀಗ ನಮ್ಮ ನೆತ್ತರು ಹರಿಸುತ್ತಿರುವ ನಮ್ಮ ವೈರಿಗಳನ್ನು ಸದೆಬಡಿಯಲು ದೇಶವು ತನ್ನೆಲ್ಲಾ ಅಧಿಕಾರವನ್ನು ಬಳಿಸಿಕೊಳ್ಳಬೇಕು. ಇದು ‘ಜಿಹಾದ್’ ಅಲ್ಲ ಭಯೋತ್ಪಾದನೆಯಷ್ಟೆಅಲಿ ಹಸನ್ ಕಾಶ್ಮೀರದಲ್ಲಿರುವ ಜಾಮಿಯಾ ಮಸೀದಿಯ ಇಮಾಮ್
ಕಾಶ್ಮೀರದವರಾದ ನಮಗೆ ನಾಚಿಕೆಯಾಗಿದೆ. ಈ ದೇಶದ ಜನರಲ್ಲಿ ನಾನು ಕ್ಷಮೆ ಕೇಳಲು ಬಯಸುತ್ತೇನೆ. ನಮಗೆ ಅತೀವ ದುಃಖವಾಗಿದೆ. ಸರ್ಕಾರವು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕುಮೆಹೆಬೂಬಾ ಮುಫ್ತಿ ಪಿಡಿಪಿ ಮುಖ್ಯಸ್ಥೆ
* ಇಸ್ಲಾಮಿನ ವಿಧ್ವಾಂಸರು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಪಾಕಿಸ್ತಾನ ಹಾಗೂ ಭಯೋತ್ಪಾದನೆಯ ವಿರುದ್ಧ ಘೋಷಣೆಗಳನ್ನು ಕೂಗಿದರು
* ಇತ್ತೀಗೆಷ್ಟೆ ಮೇಘಸ್ಫೋಟದಿಂದ ತತ್ತರಿಸಿದ್ದ ರಾಮ್‌ಬನ್ ಪ್ರದೇಶದ ಸಾರ್ವಜನಿಕರೂ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು
* ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ರದ್ದುಪಡಿಸಿದ ಬಳಿಕ ಇದೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿತ್ತು. ಕಾಶ್ಮೀರದೆಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು
* ದಾಳಿ ಖಂಡಿಸಿ ಪ್ರತಿಭಟನೆ ನಡೆಸಲು ಅವಕಾಶ ನೀಡಲಿಲ್ಲ ಎಂದು ದೂರಿದ ಜಮ್ಮುವಿನ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು
‘ಇದು ಪುಲ್ವಾಮಾ–2’
ಇದು ಕಾಕತಾಳೀಯವಲ್ಲ. ಇದೊಂದು ಯೋಜಿತ ಕೃತ್ಯ. ಪಾಕಿಸ್ತಾನದ ಎಸ್‌ಎಸ್‌ಜಿ ಕಮಾಂಡೊಗಳು ಭಯೋತ್ಪಾದಕರಿಂತೆ ವೇಷತೊಟ್ಟು ಬರುತ್ತಾರೆ. ಈ ವಿಚಾರವನ್ನು ನಾನು ಈ ಹಿಂದೆಯೂ ಹೇಳಿದ್ದೇನೆ. ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ಹೇಳಿಕೆಯೊಂದನ್ನು ನೀಡಿದ್ದರು. ಈಗ ದಾಳಿ ನಡೆದಿದೆ. ಆಸಿಮ್ ಅವರು ‘ಜಿಹಾದ್’ ಭಾಷೆ ಬಳಸುತ್ತಿದ್ದಾರೆ. ಇದೇ ರೀತಿಯಲ್ಲಿಯೇ ಈಗ ದಾಳಿ ನಡೆಸಲಾಗಿದೆ. ಹಮಾಸ್ ಬಂಡುಕೋರರು ದಾಳಿ ನಡೆಸಿದ ಬಳಿಕ ಇಸ್ರೇಲ್ ಹೇಗೆ ಪ್ರತಿಕ್ರಿಯಿಸಿತೊ ಹಾಗೆಯೇ ನಾವೂ ಪ್ರತಿಕ್ರಿಯಿಸಬೇಕು. ಎಸ್.ಪಿ. ವೈದ್ ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.