ADVERTISEMENT

ಕೂಪರ್ ಮಹಸೀರ್: 'ಕಾಟ್ಲೆ'ಯನ್ನು ರಾಜ್ಯದ ಮೀನು ಎಂದು ಘೋಷಿಸಿದ ಸಿಕ್ಕಿಂ ಸರ್ಕಾರ

ಪಿಟಿಐ
Published 19 ಸೆಪ್ಟೆಂಬರ್ 2021, 7:08 IST
Last Updated 19 ಸೆಪ್ಟೆಂಬರ್ 2021, 7:08 IST

ಗ್ಯಾಂಗ್ಟಕ್: ಸ್ಥಳೀಯವಾಗಿ 'ಕಾಟ್ಲೆ' ಎಂದು ಕರೆಯಲಾಗುವ 'ಕೂಪರ್ ಮಹಸೀರ್' ಅನ್ನು ಸಿಕ್ಕಿಂ ಸರ್ಕಾರವು ರಾಜ್ಯ ಮೀನು ಎಂದು ಘೋಷಿಸಿದೆ ಎಂದು ಮೀನುಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಯೋಲಿಸೋಚಿಲಸ್ ಹೆಕ್ಸಾಗೊನೊಲೆಪಿಸ್ (Neolissochilus hexagonolepis) ಅನ್ನು ಸಾಮಾನ್ಯವಾಗಿ ಕೂಪರ್ ಮಹಸೀರ್ ಮತ್ತು ಸ್ಥಳೀಯವಾಗಿ 'ಕಾಟ್ಲೆ' ಎಂದು ಕರೆಯಲಾಗುತ್ತದೆ. ಸ್ಥಳೀಯವಾಗಿ ಮೀನಿನ ಮಹತ್ವವನ್ನು ಎತ್ತಿ ಹಿಡಿಯಲು ಮತ್ತು ಅದರ ಸಂರಕ್ಷಣಾ ಕ್ರಮಗಳಿಗೆ ಒತ್ತು ನೀಡಲು ರಾಜ್ಯ ಸರ್ಕಾರವು ಇದನ್ನು 'ರಾಜ್ಯದ ಮೀನು' ಎಂದು ಘೋಷಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕಾಟ್ಲೆ ಸಿಕ್ಕಿಂ ರಾಜ್ಯದಲ್ಲಿ ಪ್ರಮುಖವಾಗಿ ತೀಸ್ತಾ ಮತ್ತು ರಂಗಿತ್ ನದಿಗಳಲ್ಲಿ ಮತ್ತು ಅವುಗಳ ಉಪನದಿಗಳಲ್ಲಿ ಕಂಡುಬರುತ್ತದೆ. 1992 ರಲ್ಲಿ, ಲಖನೌದ ಐಸಿಎಆರ್-ನ್ಯಾಷನಲ್ ಬ್ಯೂರೋ ಆಫ್ ಫಿಶ್ ಜೆನೆಟಿಕ್ ರಿಸೋರ್ಸಸ್ (ಐಸಿಎಆರ್-ಎನ್‌ಬಿಎಫ್‌ಜಿಆರ್) ಕಾಟ್ಲೆ ಮೀನುಗಳನ್ನು ಅಳಿವಿನಂಚಿನಲ್ಲಿರುವ ಪ್ರಬೇಧವೆಂದು ವರ್ಗೀಕರಿಸಿದೆ. ನಂತರ, 2014ರಲ್ಲಿ ಈ ಮೀನನ್ನು ಐಯುಸಿಎನ್ (ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್) ಕೂಡ ಅಳಿವಿನಂಚಿನಲ್ಲಿರುವ ಮೀನು ಎಂದು ವರ್ಗೀಕರಿಸಿದೆ' ಎಂದು ಮೀನುಗಾರಿಕಾ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಸಿ.ಎಸ್. ರೈ ಹೇಳಿದರು.

ADVERTISEMENT

ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಈ ಮೀನಿಗೆ, ರಾಜ್ಯದ ಸಾರ್ವಜನಿಕರು ಹೆಚ್ಚಿನ ಆದ್ಯತೆ ನೀಡುತ್ತಾರೆ. ಸಿಕ್ಕಿಂ ಸರ್ಕಾರವು ಈಗಾಗಲೇ ರಾಜ್ಯದ ಜಲಾಶಯಗಳನ್ನು ಮೀನುಗಾರಿಕೆ ಚಟುವಟಿಕೆಗಳಿಗೆ ಮುಕ್ತ ಎಂದು ಘೋಷಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

'ಸಿಕ್ಕಿಂ ಮೀನುಗಾರಿಕಾ ನಿಯಮಗಳು, 1990 ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ ನಿಬಂಧನೆಗಳಿಗೆ ಅನುಗುಣವಾಗಿ ಜಲಾಶಯಗಳಲ್ಲಿ ಮೀನುಗಾರಿಕೆಗೆ ಆಸಕ್ತಿ ಹೊಂದಿರುವ ವೈಯಕ್ತಿಕ ಮೀನುಗಾರರು ಅಥವಾ ಮೀನುಗಾರರ ಸಹಕಾರ ಸಂಘಗಳು ಅಥವಾ ಎಸ್‌ಎಚ್‌ಜಿಗಳಿಗೆ ಮೀನುಗಾರಿಕಾ ನಿರ್ದೇಶನಾಲಯದಿಂದ ಪರವಾನಗಿ ನೀಡಲಾಗುತ್ತದೆ' ಎಂದು ಅಧಿಕಾರಿ ತಿಳಿಸಿದ್ದಾರೆ.

ಜಲಾಶಯಗಳು ಉತ್ತರ ಸಿಕ್ಕಿಂನ ಚುಂಗ್‌ಥಾಂಗ್‌, ಪೂರ್ವ ಸಿಕ್ಕಿಂನ ಡಿಚು ಮತ್ತು ರೊರಥಾಂಗ್‌ ಸೇರಿ ಪಶ್ಚಿಮ ಸಿಕ್ಕಿಂನ ಲೆಗ್‌ಶೆಪ್‌ನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.