ADVERTISEMENT

ಮೂಲಭೂತ ಹಕ್ಕು, ಸಂವಿಧಾನವನ್ನು ತುಳಿಯುತ್ತಿರುವಾಗ ಮೌನವಾಗಿರುವುದು ಪಾಪ: ಸೋನಿಯಾ

ಪಿಟಿಐ
Published 16 ಆಗಸ್ಟ್ 2021, 13:43 IST
Last Updated 16 ಆಗಸ್ಟ್ 2021, 13:43 IST
ಸೋನಿಯಾ ಗಾಂಧಿ, ಪಿಟಿಐ ಚಿತ್ರ
ಸೋನಿಯಾ ಗಾಂಧಿ, ಪಿಟಿಐ ಚಿತ್ರ   

ನವದೆಹಲಿ: ಭಾರತವು ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಕಾಲಿಟ್ಟಿದ್ದು, ಸ್ವಾತಂತ್ರ್ಯದ ಅರ್ಥವೇನೆಂದು ಆತ್ಮಾವಲೋಕನ ಮಾಡಿಕೊಳ್ಳುವಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೇಶದ ಜನರನ್ನು ಒತ್ತಾಯಿಸಿದ್ದಾರೆ. ಮೂಲಭೂತ ಹಕ್ಕುಗಳು ಮತ್ತು ಸಂವಿಧಾನವನ್ನು ತುಳಿಯುತ್ತಿರುವಾಗ ಮೌನವಾಗಿರುವುದು ‘ಪಾಪ’ ಎಂದು ಅವರು ಹೇಳಿದ್ದಾರೆ.

ದೇಶದ ಪ್ರಜಾಪ್ರಭುತ್ವವನ್ನು ಸರಿಪಡಿಸುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.

‘ನಮ್ಮ ಸಂವಿಧಾನದ ಪಿತಾಮಹರಿಂದ ಜನರಿಗಾಗಿ ರೂಪಿಸಲ್ಪಟ್ಟ ಮೂಲಭೂತ ಹಕ್ಕುಗಳನ್ನು ತುಳಿಯುತ್ತಿರುವಾಗ, ಮೌನವಾಗಿರುವುದು ಪಾಪ’ ಎಂದು ಆಂಗ್ಲ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಸೋನಿಯಾ ಅವರ ಲೇಖನವನ್ನು ಉಲ್ಲೇಖಿಸಿ ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ADVERTISEMENT

ಸರ್ಕಾರವು ಸಂಸತ್ತಿನ ಮೇಲೆ ‘ದಾಳಿ’ ಮಾಡಿದಾಗ ಮತ್ತು ಅದರ ಸಂಪ್ರದಾಯಗಳನ್ನು ‘ತುಳಿಯುವ’, ಪ್ರಜಾಪ್ರಭುತ್ವವನ್ನು ಗುಲಾಮಗಿರಿಗೆ ತಳ್ಳುವ, ಸಂವಿಧಾನವನ್ನು ‘ಉಲ್ಲಂಘಿಸುವ’ ಪ್ರಯತ್ನ ಮತ್ತು ಸಾಂಸ್ಥಿಕ ಸ್ವಾಯತ್ತತೆಗೆ ಕಡಿವಾಣ ಹಾಕುವ ಸಂದರ್ಭ ದೇಶದ ಜನರು ಸ್ವಾತಂತ್ರ್ಯದ ಅರ್ಥವೇನೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸೋನಿಯಾ ಹೇಳಿದ್ದಾರೆ.

ಪ್ರಸ್ತುತ ಪತ್ರಕರ್ತರಿಗೆ ಬರೆಯುವ ಸ್ವಾತಂತ್ರ್ಯವಿಲ್ಲ, ಟಿವಿ ಚಾನೆಲ್‌ಗಳಿಗೆ ಸತ್ಯವನ್ನು ತೋರಿಸುವ ಸ್ವಾತಂತ್ರ್ಯ ಮತ್ತು ಬರಹಗಾರರು ಹಾಗೂ ಚಿಂತಕರು ತಮ್ಮನ್ನು ಅಭಿವ್ಯಕ್ತಿಗೊಳಿಸುವ ಸ್ವಾತಂತ್ರ್ಯವನ್ನು ಹೊಂದಿಲ್ಲ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ಸಂಸತ್ ಸದಸ್ಯರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವಾತಂತ್ರ್ಯವಿಲ್ಲ, ಆಮ್ಲಜನಕ ಕೊರತೆಯ ಬಿಕ್ಕಟ್ಟು ಮತ್ತು ಜಿಎಸ್‌ಟಿಯಿಂದ ಬಳಲುತ್ತಿರುವ ಜನರಿಗೆ ಮಾತನಾಡುವ ಸ್ವಾತಂತ್ರ್ಯವಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ತಮ್ಮ ಹಕ್ಕುಗಳನ್ನು ಪಡೆಯುವ ಸ್ವಾತಂತ್ರ್ಯವಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಭಾರತದ ಪ್ರಜಾಪ್ರಭುತ್ವಕ್ಕೆ ದುರಸ್ತಿ ಅಗತ್ಯವಿದೆ ಎಂದು ತನ್ನ ಲೇಖನದಲ್ಲಿ ಸೋನಿಯಾ ವಾದಿಸಿದ್ದಾರೆ.

ಕಳೆದ ಕೆಲವು ದಶಕಗಳಲ್ಲಿ ಸಾಧಿಸಿದ ಪ್ರಗತಿಯನ್ನು ಪ್ರಸ್ತುತ ಸರ್ಕಾರದ ಅಡಿಯಲ್ಲಿ ಹಿಮ್ಮುಖಗೊಳಿಸಲಾಗಿದೆ ಎಂದು ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.