
ಕೋಲ್ಕತ್ತ/ಚೆನ್ನೈ/ತಿರುವನಂತಪುರ: ‘ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಸೂಕ್ತ ಕಾರ್ಯಯೋಜನೆ ಇಲ್ಲದೆಯೇ ಬಲವಂತವಾಗಿ ನಡೆಸಲಾಗುತ್ತಿದೆ. ಸಾರ್ವಜನಿಕರನ್ನೂ, ಅಧಿಕಾರಿಗಳನ್ನೂ ಈ ಪ್ರಕ್ರಿಯೆಯು ಅಪಾಯಕ್ಕೆ ಒಡ್ಡುತ್ತಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಗುರುವಾರ ಪತ್ರ ಬರೆದಿರುವ ಮಮತಾ, ‘ಎಸ್‌ಐಆರ್ ಪ್ರಕ್ರಿಯು ಭಯಾನಕ ಮತ್ತು ಆತಂಕಕಾರಿ ಘಟ್ಟ ತಲುಪಿದೆ. ಪ್ರಕ್ರಿಯೆ ಕುರಿತ ಕಳವಳವನ್ನು ಕಾಲ ಕಾಲಕ್ಕೆ ನಾನು ವ್ಯಕ್ತಪಡಿಸಿದ್ದೇನೆ. ಪರಿಸ್ಥಿತಿಯ ಗಾಂಭೀರ್ಯವು ಈಗ ನಿಮಗೆ ಪತ್ರ ಬರೆಯುವಂತೆ ಮಾಡಿದೆ’ ಎಂದಿದ್ದಾರೆ.
‘ಪ್ರಕ್ರಿಯೆ ನಡೆಸಲು ಸಾಮಾನ್ಯ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ. ಜನರ ಮೇಲೆ ಇದನ್ನು ಹೇರಲಾಗುತ್ತಿದೆ. ಪ್ರಕ್ರಿಯೆಯು ಸಂಪೂರ್ಣ ಗೊಂದಲದ ಗೂಡಾಗಿದೆ. ಬೂತ್ ಮಟ್ಟದ ಅಧಿಕಾರಿಗಳಾಗಿ (ಬಿಎಲ್‌ಒ) ಕೆಲಸ ಮಾಡುವವರಿಗೆ ಸೂಕ್ತ ತರಬೇತಿ ನೀಡಲಾಗಿಲ್ಲ. ಒದಗಿಸಬೇಕಿರುವ ಕಡ್ಡಾಯ ದಾಖಲೆಗಳ ಬಗ್ಗೆ ಗೊಂದಲಗಳಿವೆ’ ಎಂದು ದೂರಿದ್ದಾರೆ.
‘ಎಸ್‌ಐಆರ್ ಪ್ರಕ್ರಿಯೆಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸದೇ ಇರುವುದರಿಂದ ಸಾರ್ವಜನಿಕರು, ಅಧಿಕಾರಿಗಳ ಸಾವಿನ ಪ್ರಕರಣಗಳು ವರಿದಿಯಾಗುತ್ತಿವೆ. ಇದನ್ನು ಈಗ ಸಹಿಸಲು ಸಾಧ್ಯವೇ ಇಲ್ಲ. ಈಗ ಬಗ್ಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲೇಬೇಕು’ ಎಂದು ಆಯೋಗವನ್ನು ಮಮತಾ ಒತ್ತಾಯಿಸಿದ್ದಾರೆ.
ಪ್ರತಿಭಟನೆ: ‘ಡಿಎಂಕೆ ತನ್ನ ಪಕ್ಷದ ಕಾರ್ಯಕರ್ತರನ್ನು ಬಳಿಸಿಕೊಂಡು ಅಕ್ರಮಗಳನ್ನು ನಡೆಸುತ್ತಿದೆ’ ಎಂದು ಆರೋಪಿಸಿ ಎಐಎಡಿಎಂಕೆ ಪಕ್ಷವು ಡಿಎಂಕೆ ಸರ್ಕಾರದ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿತು.
ಇದು ಅವರ (ಮಮತಾ) ಹತಾಶೆಯನ್ನು ತೋರಿಸುತ್ತದೆ. ತಮ್ಮನ್ನು ಅಧಿಕಾರಕ್ಕೆ ತರುವವರನ್ನು ರಕ್ಷಿಸಲು ಮತದಾರರ ಪಟ್ಟಿಯನ್ನು ಸ್ವಚ್ಛ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಲು ಯತ್ನಿಸುತ್ತಿದ್ದಾರೆಪ್ರದೀಪ್ ಭಂಡಾರಿ ಬಿಜೆಪಿಯ ರಾಷ್ಟ್ರೀಯ ವಕ್ತಾರ
ತಿರುವನಂತಪುರ ಕಾರ್ಪೊರೇಷನ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಕಾಂಗ್ರೆಸ್ ಪಕ್ಷದ ವ್ಯಾಸ್ನಾ ಎಸ್.ಎಲ್ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಿದ್ದ ಬಗ್ಗೆ ಪಕ್ಷವು ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಇದರ ಹಿಂದೆ ಪಿತೂರಿ ಇತ್ತು’ ಎಂದೂ ಹೇಳಿದೆ.
‘ಆಡಳಿತಾರೂಢ ಎಲ್‌ಡಿಎಫ್ ಪಕ್ಷದ ಹೇಡಿತನವನ್ನು ಇದು ತೋರಿಸುತ್ತದೆ. ಯಾವ ಅಧಿಕಾರಿ ವ್ಯಾಸ್ನಾ ಅವರ ಹೆಸರನ್ನು ಪಟ್ಟಿಯಿಂದ ಅಳಿಸಿದರೊ ಅವರಿಗೆ ಆ ಹುದ್ದೆಯಲ್ಲಿ ಇರುವ ಅರ್ಹತೆ ಇಲ್ಲ. ಎಲ್‌ಡಿಎಫ್ ಪಕ್ಷವು ಯಾವಾಗಲೂ ಅಧಿಕಾರದಲ್ಲಿ ಇರುವುದಿಲ್ಲ. ಇಂಥ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಹೇಳಿದರು.
ತಮ್ಮ ಹೆಸರನ್ನು ಪಟ್ಟಿಯಿಂದ ಅಳಿಸಿ ಹಾಕಿರುವ ಬಗ್ಗೆ ನೋಟಿಸ್ ಬಂದ ಕೂಡಲೇ ವ್ಯಾಸ್ನಾ ಅವರು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ವ್ಯಾಸ್ನಾ ಅವರ ಮನವಿಯನ್ನು ಪುರಸ್ಕರಿಸಿ ಎಂದು ಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಈ ಬಳಿಕ ಆಯೋಗವು ವ್ಯಾಸ್ನಾ ಅವರ ಹೆಸರನ್ನು ಪಟ್ಟಿಗೆ ಬುಧವಾರ ಸೇರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.