ADVERTISEMENT

ಬಿಎಲ್‌ಒ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಿಮಿನಲ್‌ ಕ್ರಮ: ಎಚ್ಚರಿಕೆ

ಪಿಟಿಐ
Published 19 ನವೆಂಬರ್ 2025, 17:27 IST
Last Updated 19 ನವೆಂಬರ್ 2025, 17:27 IST
---
---   

ತಿರುವನಂತಪುರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳ (ಬಿಎಲ್‌ಒ) ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಿಮಿನಲ್‌ ಕ್ರಮ ಜರುಗಿಸಲಾಗುವುದು ಎಂದು ಕೇರಳ ಮುಖ್ಯ ಚುನಾವಣಾಧಿಕಾರಿ ರತನ್ ಯು ಕೇಲ್ಕರ್‌ ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಲ್‌ಒಗಳು ಕರ್ತವ್ಯ ನಿರ್ವಹಿಸದಂತೆ ಕೆಲವರು ತಡೆಯುತ್ತಿದ್ದಾರೆ. ಅವರ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ ಮತ್ತು ಬಿಎಲ್‌ಒಗಳನ್ನು ಗುರಿಯಾಗಿಸಿ ಸೈಬರ್‌ ದಾಳಿ ಮಾಡುತ್ತಿದ್ದಾರೆ ಎಂಬ ವರದಿಗಳು ನಮಗೆ ಬಂದಿವೆ ಎಂದು ತಿಳಿಸಿದರು.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್‌ಐಆರ್‌ ನಡೆಸುತ್ತಿರುವ ಬಿಎಲ್‌ಒಗಳು ಸಾರ್ವಜನಿಕ ಸೇವಕರು. ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಸೈಬಲ್‌ ದಾಳಿ ಮಾಡುವುದು ಅಥವಾ ಅವರ ವಿರುದ್ಧ ಸುಳ್ಳು ಮಾಹಿತಿ ಹರಡುವುದನ್ನು ಮಾಡಿದರೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ಎಚ್ಚರಿಸಿದರು.

ADVERTISEMENT

‘ಇಂತಹ ವ್ಯಕ್ತಿಗಳ ಮೇಲೆ ಸೆಕ್ಷನ್ 121ರ ಅಡಿಯಲ್ಲಿ ಅಥವಾ ಸೈಬರ್‌ ಕಾನೂನು, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು’ ಎಂದರು.

‘ಚುನಾವಣಾ ಆಯೋಗ ನಿಗದಿ ಮಾಡಿದ ಕಾಲಮಿತಿಯಲ್ಲಿ ಎಸ್‌ಐಆರ್‌ ಕಾರ್ಯ ಕಟ್ಟುನಿಟ್ಟಾಗಿ ನಡೆಯಲೇಬೇಕು. ಬಿಎಲ್‌ಒಗಳಿಗೆ ಪೊಲೀಸರು ಸೇರಿದಂತೆ ಸ್ವಯಂಸೇವಾ ಸಂಸ್ಥೆಗಳಿಂದಲೂ ಭದ್ರತೆ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಬಿಎಲ್‌ಒಗಳ ಮೇಲೆ ಒತ್ತಡ ಹಾಕುವುದಕ್ಕಿಂತ ಅವರ ಹೊಣೆ ನಿಭಾಯಿಸಲು ಪ್ರೋತ್ಸಾಹಿಸಬೇಕು. ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯ ಸುಗಮವಾಗಿ ನಡೆದು ದೋಷ ಮುಕ್ತ ಪಟ್ಟಿ ತಯಾರಾಗಲು ಸಾರ್ವಜನಿಕರು ಸೇರಿದಂತೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.