
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಬಿಹಾರದಲ್ಲಿನ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ನಂತರ ನಡೆದ ಚುನಾವಣೆಯನ್ನು ಉಲ್ಲೇಖಿಸಿ ಭಾರತದ ಚುನಾವಣಾ ವ್ಯವಸ್ಥೆಯ ಕುರಿತು ಅಂತರರಾಷ್ಟ್ರೀಯ ಚುನಾವಣಾ ನಿರ್ವಹಣಾ ಸಂಸ್ಥೆಗಳಿಗೆ ಬುಧವಾರ ವಿವರಿಸಿದರು.
ಎಸ್‌ಐಆರ್ ನಂತರ ಬಿಹಾರದಲ್ಲಿ ಚುನಾವಣೆ ನಡೆದಿದ್ದು, ಮತದಾರರ ಅಂತಿಮ ಪಟ್ಟಿ ಸಿದ್ಧವಾದ ನಂತರ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗಿಲ್ಲ. ಮರುಮತದಾನದ ಅಗತ್ಯವೂ ಎದುರಾಗಿಲ್ಲ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣೆ ಕುರಿತ 2026ನೇ ಸಾಲಿನ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮತದಾರರ ಪಟ್ಟಿ ಸಿದ್ಧಪಡಿಸಲು ಸಹಾಯ ಮಾಡುವ ಮತಗಟ್ಟೆ ಅಧಿಕಾರಿಗಳು, ತಳಮಟ್ಟದ ಕಾರ್ಯಕರ್ತರು ದೇಶದ ಚುನಾಯಿತ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಎಂದು ಹೇಳಿದರು.
‘ಬಿಹಾರದಲ್ಲಿ ಕೆಲವು ತಿಂಗಳ ಹಿಂದೆ ಚುನಾವಣೆ ನಡೆಯಿತು. ಮೊದಲ ಹಂತದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಲಾಯಿತು. ಚುನಾವಣಾ ಕಾನೂನು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಪ್ರಕ್ರಿಯೆ ನಡೆಯಿತು. ಪರಿಣಾಮವಾಗಿ ಅರ್ಹ ಮತದಾರರ ಹೆಸರು ಪಟ್ಟಿಗೆ ಸೇರ್ಪಡೆಯಾಯಿತು ಮತ್ತು ಅನರ್ಹರ ಹೆಸರನ್ನು ಅಳಿಸಿಹಾಕಲಾಯಿತು. ಮತಗಟ್ಟೆ ಅಧಿಕಾರಿಗಳು, ಚುನಾವಣಾ ನೋಂದಣಾಧಿಕಾರಿಗಳು ಮತ್ತು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಅವರು ದಕ್ಷತೆಯಿಂದ ಕಾರ್ಯ ನಿರ್ವಹಿಸಿದರು. ಇದೆಲ್ಲರ ಪರಿಣಾಮವಾಗಿ ಚುನಾವಣೆ ಬಳಿಕ ಒಂದೂ ಆಕ್ಷೇಪ ವ್ಯಕ್ತವಾಗಿಲ್ಲ’ ಎಂದು ಹೇಳಿದರು.
‘ಬಿಹಾರದಲ್ಲಿ ಸುಮಾರು ಒಂದು ಲಕ್ಷ ಮತಗಟ್ಟೆಗಳಿವೆ. ಹೀಗಿದ್ದರೂ ಯಾವುದೇ ಮತಗಟ್ಟೆಯಲ್ಲೂ ಮರುಮತದಾನ ನಡೆಸುವ ಪ್ರಮೇಯವೇ ಬರಲಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.