
ಕೋಲ್ಕತ್ತ: ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಆತಂಕಕ್ಕೆ ಒಳಗಾಗಿ ರಾಜ್ಯದಲ್ಲಿ ಪ್ರತಿದಿನ ಮೂರರಿಂದ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಶುಕ್ರವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಈ ಸಾವಿನ ಹೊಣೆ ಹೊರಬೇಕು’ ಎಂದು ಒತ್ತಾಯಿಸಿದರು.
‘ಎಸ್‌ಐಆರ್ ಪ್ರಕ್ರಿಯೆ ಆರಂಭವಾದಾಗಿನಿಂದ ಇದುವರೆಗೆ 110ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಪ್ರತಿದಿನ ಮೂರರಿಂದ ನಾಲ್ಕು ಮಂದಿ ಆತಂಕದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.
ಬಿಜೆಪಿಯು ಬಂಗಾಳದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ‘ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್, ಬೋಸ್ ಮತ್ತು ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಲಾಗುತ್ತಿದೆ’ ಎಂದು ಟೀಕಿಸಿದರು.
ಬಂಗಾಳದಲ್ಲಿ ಬಂಗಾಳಿಗರು ಸುರಕ್ಷಿತರಲ್ಲ
ಜಬಲ್ಪುರ (ಮಧ್ಯಪ್ರದೇಶ): ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಸಮುದಾಯವು ಸುರಕ್ಷಿತವಾಗಿಲ್ಲ ಎಂದು ಕೇಂದ್ರ ಸಚಿವ ಜೆ.ಪಿ ನಡ್ಡಾ ಶುಕ್ರವಾರ ಹೇಳಿದರು. ಇಲ್ಲಿನ ಬಂಗಾಳಿ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಬಂಗಾಳವು ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಟೀಕಿಸಿದರು. ನಡ್ಡಾ ಅವರಿಗಿಂತಲೂ ಮುನ್ನ ಮಾತನಾಡಿದ ಅತಿಥಿಯೊಬ್ಬರು ‘ಮಧ್ಯ ಪ್ರದೇಶದಲ್ಲಿ ಬಂಗಾಳಿ ಸಮುದಾಯವು ಸುರಕ್ಷಿತವಾಗಿದೆ’ ಎಂದು ಹೇಳಿದರು. ಆ ಹೇಳಿಕೆಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ನಡ್ಡಾ ‘ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಸಮುದಾಯವು ಸುರಕ್ಷಿತವಾಗಿಲ್ಲ. ಇದು ವಿಪರ್ಯಾಸ’ ಎಂದರು. ‘ಬಂಗಾಳಕ್ಕೆ ಬದಲಾವಣೆಯ ಅಗತ್ಯವಿದೆ ಎಂಬ ಸಂದೇಶ ಸಾರುವ ಸಮಯ ಬಂದಿದೆ. ಇಡೀ ದೇಶವು ಬಂಗಾಳದೊಂದಿಗೆ ನಿಲ್ಲಬೇಕು ಮತ್ತು ನಾವು ಆ ರಾಜ್ಯವನ್ನು ಬಿಕ್ಕಟ್ಟಿನಿಂದ ಪಾರುಮಾಡಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.