ADVERTISEMENT

ಜಮ್ಮುವಿನಲ್ಲಿ ಅವಳಿ ಬಾಂಬ್‌ ಸ್ಫೋಟ: 9 ಜನರಿಗೆ ಗಾಯ

ಪಿಟಿಐ
Published 21 ಜನವರಿ 2023, 17:58 IST
Last Updated 21 ಜನವರಿ 2023, 17:58 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಜಮ್ಮು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆ ಜಮ್ಮು ತಲುಪುವ ಎರಡು ದಿನ ಮುನ್ನ, ಇಲ್ಲಿನ ಜನನಿಬಿಡ ಪ್ರದೇಶದಲ್ಲಿ ಶನಿವಾರ ಎರಡು ಕಾರುಗಳಲ್ಲಿ ಪ್ರಬಲ ಬಾಂಬ್‌ ಸ್ಫೋಟಗಳು ನಡೆದಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನರ್ವಾಲ್‌ನ ಟ್ರಾನ್ಸ್‌ಪೋರ್ಟ್‌ ನಗರದ ಕಾರಿನ ರಿಪೇರಿ ಅಂಗಡಿಯಲ್ಲಿ ನಿಲ್ಲಿಸಿದ್ದ ಎಸ್‌ಯುವಿಯಲ್ಲಿ ಹಾಗೂ ಸಮೀಪದ ಇನ್ನೊಂದು ವಾಹನದಲ್ಲಿ ಅವಳಿ ಸ್ಫೋಟಗಳು ನಡೆದಿದ್ದು, ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಬಳಸಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯನ್ನು ತೀವ್ರವಾಗಿ ಖಂಡಿರುವ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ‘ತಪ್ಪಿತಸ್ಥರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ’ ಸೂಚಿಸಿದ್ದಾರೆ.

ADVERTISEMENT

‘ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೊಲೆರೊ ಎಸ್‌ಯುವಿಯಲ್ಲಿ ಮೊದಲ ಸ್ಫೋಟ ಸಂಭವಿಸಿದ್ದು, ಐವರಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ’ ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಮುಕೇಶ್‌ ಸಿಂಗ್‌ ತಿಳಿಸಿದ್ದಾರೆ.

‘ಮೊದಲ ಸ್ಫೋಟ ಸಂಭವಿಸಿದ ಸ್ಥಳದಿಂದ 50 ಮೀಟರ್‌ ದೂರದಲ್ಲಿ 15 ನಿಮಿಷಗಳ ಅಂತರದಲ್ಲಿಯೇ ಮತ್ತೊಂದು ಸ್ಫೋಟ ಸಂಭವಿಸಿದ್ದು, ಒಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಸ್ಫೋಟಗಳಿಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಆದರೆ, ‘ಸ್ಫೋಟದ ಬಳಿಕ ಆಸ್ಪತ್ರೆಗೆ ಒಂಬತ್ತು ಜನರನ್ನು ಕರೆತರಲಾಯಿತು’ ಎಂದು ಸರ್ಕಾರಿ ವೈದ್ಯಕೀಯ ಕಾಲೇಜಿನ (ಜಿಎಂಸಿ) ವೈದ್ಯರು ತಿಳಿಸಿದ್ದಾರೆ. ‘ಈ ಒಂಬತ್ತು ಜನರಲ್ಲಿ ಒಬ್ಬರಿಗೆ ಕಿಬ್ಬೊಟ್ಟೆ ನೋವಿದ್ದರೆ, ಇನ್ನಿಬ್ಬರ ಕಾಲಿಗೆ ಗಾಯಗಳಾಗಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರತ್‌ ಜೋಡೊ ಯಾತ್ರೆ ಹಾಗೂ ಗಣರಾಜ್ಯೋತ್ಸವ ಸಮೀಪಿಸುತ್ತಿರುವ ಕಾರಣ ಈ ಭಾಗದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇದರ ನಡುವೆಯೂ ಭಯೋತ್ಪಾದಕರು ಅವಳಿ ಬಾಂಬ್‌ ಸ್ಫೋಟ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.