ADVERTISEMENT

ಜಾರ್ಖಂಡ್: ನದಿಗೆ ಉರುಳಿದ ಬಸ್– 6 ಪ್ರಯಾಣಿಕರ ಸಾವು

ಪಿಟಿಐ
Published 17 ಸೆಪ್ಟೆಂಬರ್ 2022, 14:28 IST
Last Updated 17 ಸೆಪ್ಟೆಂಬರ್ 2022, 14:28 IST
   

ರಾಂಚಿ: ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯಿಂದ ನದಿಗೆ ಬಿದ್ದಿರುವ ಘಟನೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ದುರ್ಘಟನೆಯಲ್ಲಿ ಕನಿಷ್ಠ ಆರು ಜನರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಿರಿದಿಹ್ ಜಿಲ್ಲೆಯಿಂದ ರಾಂಚಿಗೆ ತೆರಳುತ್ತಿದ್ದ ಬಸ್ ಸೇತುವೆಯ ತಡೆಗೋಡೆ ಕುಸಿದ ಪರಿಣಾಮ ಸಿವಾನ್ನೆ ನದಿಯ ಒಣ ಪ್ರದೇಶದಲ್ಲಿ ಬಿದ್ದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ರತನ್ ಚೋಥೆ ತಿಳಿಸಿದ್ದಾರೆ. ತತಿಜಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೆಲವು ಪ್ರಯಾಣಿಕರು ಬಸ್‌ನಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಹಜಾರಿಬಾಗ್‌ನ ಸದರ್ ಆಸ್ಪತ್ರೆಯಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಆರ್‌ಐಎಂಎಸ್‌) ಕಳುಹಿಸಲು ಸಿದ್ಧತೆ ನಡೆಸುತ್ತಿದ್ದೇವೆ.’ಎಂದು ಅವರು ಹೇಳಿದರು.

ನದಿಯ ಮಧ್ಯಭಾಗದ ನೀರಿಗೆ ಬಸ್ ಉರುಳಿದ್ದರೆ ಹೆಚ್ಚು ಹಾನಿಯಾಗುತ್ತಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಕೆಲವು ಪ್ರಯಾಣಿಕರು ಇನ್ನೂ ಬಸ್‌ನಲ್ಲಿ ಸಿಲುಕಿಕೊಂಡಿದ್ದು, ಗ್ಯಾಸ್ ಕಟ್ಟರ್‌ಗಳ ಸಹಾಯದಿಂದ ಬಸ್‌ನಲ್ಲಿ ದ್ವಾರ ನಿರ್ಮಿಸಿ ಅವರನ್ನು ರಕ್ಷಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.