ADVERTISEMENT

ಮಧ್ಯ‍ಪ್ರದೇಶದ ಸತ್ನಾದಲ್ಲಿ ವ್ಯಾನ್‌–ಬಸ್‌ ಮುಖಾಮುಖಿ: 6 ಶಾಲಾ ಮಕ್ಕಳು ದುರ್ಮರಣ

ದುರ್ಘಟನೆ

ಪಿಟಿಐ
Published 22 ನವೆಂಬರ್ 2018, 12:16 IST
Last Updated 22 ನವೆಂಬರ್ 2018, 12:16 IST
ಬಿರ್ಸಿಗಾಪುರದಲ್ಲಿ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ಬಸ್‌ – ಪಿಟಿಐ ಚಿತ್ರ
ಬಿರ್ಸಿಗಾಪುರದಲ್ಲಿ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ಬಸ್‌ – ಪಿಟಿಐ ಚಿತ್ರ   

ಸತ್ನಾ, ಮಧ್ಯಪ್ರದೇಶ: ಇಲ್ಲಿನ ಬಿರ್ಸಿಗಾಪುರದಲ್ಲಿ ಬಸ್‌ ಮತ್ತು ಶಾಲಾ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಚಾಲಕ ಸೇರಿದಂತೆ ಆರು ಮಂದಿ ಮಕ್ಕಳು ಸಾವನ್ನ‍‍ಪ‍್ಪಿದ್ದಾರೆ.

ಅಪಘಾತದಲ್ಲಿ 11 ಮಂದಿ ಗಾಯಗೊಂಡಿದ್ದು, ಇವರಲ್ಲಿ ಐದು ಮಂದಿ ಮಕ್ಕಳಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ದುರ್ಘಟನೆಯಲ್ಲಿ ಏಳು ಮಕ್ಕಳು ಸೇರಿದಂತೆ 8 ಮಂದಿ ಸಾವನ್ನಪ‍್ಪಿದ್ದರು ಎಂದು ಪೊಲೀಸರು ಈ ಹಿಂದೆ ಹೇಳಿಕೆ ನೀಡಿದ್ದರು.

ADVERTISEMENT

‘ಶಾಲಾ ವಾಹನದಲ್ಲಿ ತೆರಳುತ್ತಿದ್ದ 10ರಿಂದ 15 ವರ್ಷದ ನಾಲ್ವರು ಗಂಡು– ಇಬ್ಬರು ಹೆಣ್ಣು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ’ ಎಂದು ಸತ್ನಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ್‌ಸಿಂಗ್ ಗೌರ್‌ ತಿಳಿಸಿದರು.

ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ದೂರದಲ್ಲಿ ಅಪಘಾತ ಸಂಭವಿಸಿದ್ದು, ಮೃತ ಮಕ್ಕಳು ಲಕ್ಕಿ ಕಾನ್ವೆಂಟ್‌ ಶಾಲೆಗೆ ಸೇರಿದವರು. ಬೆಳಿಗ್ಗೆ 8.30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಎರಡು ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.ಬಸ್‌ ಚಿತ್ರಕೂಟದಿಂದ ರೇವಾ ಜಿಲ್ಲೆಗೆ ತೆರಳುತ್ತಿತ್ತು ಎಂದು ಮಾಹಿತಿ ನೀಡಿದರು.

ಈ ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್‌ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶವಾಗಿದೆ ಎಂದು ಗೌರ್‌ ತಿಳಿಸಿದರು.

ಜಿಲ್ಲಾಧಿಕಾರಿ ರಾಹುಲ್‌ ಜೈನ್‌ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತ ಕುಟುಂಬಸ್ಥರಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50 ಸಾವಿರ ನೆರವು ಘೋಷಿಸಿದರು.

ದುರಂತದ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.