ADVERTISEMENT

ಬಾಂಬೆ ಹೈಕೋರ್ಟ್‌ ಆದೇಶಕ್ಕೆ ‘ಸುಪ್ರೀಂ‘ ತಡೆ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊತ್ತ ವ್ಯಕ್ತಿ ಖುಲಾಸೆ

ಪಿಟಿಐ
Published 27 ಜನವರಿ 2021, 17:04 IST
Last Updated 27 ಜನವರಿ 2021, 17:04 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಿಂದ ಒಬ್ಬ ವ್ಯಕ್ತಿಯನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್‌ ಬುಧವಾರ ತಡೆ ನೀಡಿತು.

ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ, ವಿ.ರಾಮಸುಬ್ರಮಣಿಯನ್‌ ಅವರಿರುವ ನ್ಯಾಯಪೀಠ, ಅರ್ಜಿ ವಿಚಾರಣೆ ನಡೆಸಿತು.

ಪ್ರಕರಣಕ್ಕೆ ಸಂಬಂಧಿಸಿ, ಜ.19ರಂದು ನಾಗಪುರ ಪೀಠ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರ ಹಾಗೂ ಅಟಾರ್ನಿ ಜನರಲ್‌ ಅವರಿಗೆ ನೋಟಿಸ್‌ ಜಾರಿ ಮಾಡಿತು.

ADVERTISEMENT

ಪ್ರಕರಣದ ವಿವರ: ನಾಗಪುರ ನಿವಾಸಿ ಸತೀಶ್‌ ಎಂಬಾತ, ತಿನ್ನಲು ಕೊಡುವುದಾಗಿ ಪುಸಲಾಯಿಸಿ 12 ವರ್ಷದ ಬಾಲಕಿಯನ್ನು 2016ರ ಡಿಸೆಂಬರ್‌ನಲ್ಲಿ ತನ್ನ ಮನೆಗೆ ಕರೆದಿದ್ದ. ಆಗ, ಆರೋಪಿಯು ಬಾಲಕಿಯ ಸ್ತನಗಳನ್ನು ಬಿಗಿಯಾಗಿ ಹಿಡಿದು, ಆಕೆಯ ಬಟ್ಟೆಗಳನ್ನು ತೆಗೆಯಲು ಪ್ರಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು.

ಈ ಕುರಿತ ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್‌ ಕೋರ್ಟ್‌, ವ್ಯಕ್ತಿಗೆ 3 ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್‌ನ ನಾಗಪುರ ಪೀಠದ ಮೊರೆ ಹೋಗಿದ್ದ.

‘ಬಾಲಕಿಯ ಸ್ತನಗಳನ್ನು ಆಕೆಯ ಉಡುಪುಗಳ ಮೇಲಿನಿಂದ ಸ್ಪರ್ಶಿಸಿದರೆ, ಅದನ್ನು ಲೈಂಗಿಕ ದೌರ್ಜನ್ಯ ಎಂಬುದಾಗಿ ಪರಿಗಣಿಸಲಾಗದು. ಚರ್ಮದಿಂದ ಚರ್ಮದ ಸ್ಪರ್ಶವಾಗಿದ್ದರೆ ಮಾತ್ರ ‘ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ’ಯಡಿ (ಪೊಕ್ಸೊ) ಅಪರಾಧ ಎಂದು ಪರಿಗಣಿಸಲಾಗುತ್ತದೆ’ ಎಂದು ಹೈಕೋರ್ಟ್‌ ಪೀಠ ಅಭಿಪ್ರಾಯಪಟ್ಟಿತ್ತು.

ಆರೋಪಿ ಎಸಗಿದ ಕೃತ್ಯವನ್ನು ಲೈಂಗಿಕ ದೌರ್ಜನ್ಯ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಆತ ಮಹಿಳೆಯ ಗೌರವಕ್ಕೆ ಧಕ್ಕೆ ತಂದಿದ್ದಾನೆ ಎನ್ನಬಹುದು ಎಂದೂ ಅಭಿಪ್ರಾಯಪಟ್ಟಿತ್ತು.

ಅಲ್ಲದೇ, ಸತೀಶ್‌ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಸೆಷನ್ಸ್‌ ಕೋರ್ಟ್‌ ನೀಡಿದ್ದ ಆದೇಶವನ್ನು ಪರಿಷ್ಕರಿಸಿ, ಆತನನ್ನು ಖುಲಾಸೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.