ADVERTISEMENT

ಚಳಿಗಾಲದ ಅಧಿವೇಶನದ ಸಂದರ್ಭ ನಿತ್ಯವೂ ಸಂಸತ್ ಭವನದವರೆಗೂ ರೈತರಿಂದ ಟ್ರಾಕ್ಟರ್ ಜಾಥಾ

ಪಿಟಿಐ
Published 9 ನವೆಂಬರ್ 2021, 16:42 IST
Last Updated 9 ನವೆಂಬರ್ 2021, 16:42 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 29ರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಸಂದರ್ಭ ನಿತ್ಯವೂ ಸಂಸತ್ ಭವನದವರೆಗೂ ಟ್ರ್ಯಾಕ್ಟರ್ ಜಾಥಾ ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ. ಈ ಶಾಂತಿಯುತ ಜಾಥಾದಲ್ಲಿ 500 ರೈತರು ಭಾಗವಹಿಸಲಿದ್ದಾರೆ ಎಂದು ಅದು ಹೇಳಿದೆ.

ಇಂದು ನಡೆದ ರೈತ ಸಂಘಗಳ ಸಭೆ ಬಳಿಕ 40 ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಈ ಘೋಷಣೆ ಮಾಡಿದೆ.

ನವೆಂಬರ್ 26ರ ಬಳಿಕ ದೇಶದಾದ್ಯಂತ ಪ್ರತಿಭಟನೆ ತೀವ್ರಗೊಳಿಸುವುದಾಗಿ ಅದು ಹೇಳಿದೆ.

‘ನವೆಂಬರ್ 29ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿಯುವವರೆಗೂ ನಿತ್ಯ ಸ್ವಇಚ್ಛೆಯಿಂದ ಬರುವ ರೈತರು ಟ್ರ್ಯಾಕ್ಟರ್‌ನಲ್ಲಿ ಸಂಸತ್‌ಭವನದವರೆಗೆ ಜಾಥಾ ನಡೆಸಲಿದ್ದಾರೆ. ಇದು ಶಾಂತಿಯುತ ಮತ್ತು ಶಿಸ್ತಿನ ಮೆರವಣಿಗೆ ಆಗಲಿದ್ದು, ರಾಜಧಾನಿಯಲ್ಲಿ ಪ್ರತಿಭಟಿಸುವ ತಮ್ಮ ಹಕ್ಕನ್ನು ಸಾರಲಿದ್ದಾರೆ’ಎಂದು ಎಸ್‌ಕೆಎಂ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ದೇಶದಾದ್ಯಂತ ರೈತರು ನಡೆಸುತ್ತಿರುವ ಐತಿಹಾಸಿಕ ಹೋರಾಟದ ಭಾಗವಾಗಿ ಈ ಜಾಥಾ ನಡೆಸಲಾಗುತ್ತಿದ್ದು, ವಿವಾದಿತ ಕಾಯ್ದೆಗಳನ್ನು ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿದೆ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.