ADVERTISEMENT

ವೈದ್ಯಕೀಯ ಆಮ್ಲಜನಕದ ಕೊರತೆ; ದೆಹಲಿಯಲ್ಲಿ ಸಣ್ಣ ಆಸ್ಪತ್ರೆಗಳ ಪರದಾಟ

ರಾತ್ರೋ ರಾತ್ರಿ ದೊಡ್ಡ ಆಸ್ಪತ್ರೆಗಳಿಗೆ ಆಮ್ಲಜನಕ ದಾಸ್ತಾನು ಪೂರೈಕೆ

ಪಿಟಿಐ
Published 22 ಏಪ್ರಿಲ್ 2021, 6:10 IST
Last Updated 22 ಏಪ್ರಿಲ್ 2021, 6:10 IST
ನವದೆಹಲಿಯಲ್ಲಿ ಬುಧವಾರ ಸಾರ್ವಜನಿಕರೊಬ್ಬರು ಆಮ್ಲಜನಕದ ಸಿಲಿಂಡರ್‌ ಲಭ್ಯತೆ ಕುರಿತು ವಿತರಕರಲ್ಲಿ ವಿಚಾರಿಸುತ್ತಿರುವ ದೃಶ್ಯ.
ನವದೆಹಲಿಯಲ್ಲಿ ಬುಧವಾರ ಸಾರ್ವಜನಿಕರೊಬ್ಬರು ಆಮ್ಲಜನಕದ ಸಿಲಿಂಡರ್‌ ಲಭ್ಯತೆ ಕುರಿತು ವಿತರಕರಲ್ಲಿ ವಿಚಾರಿಸುತ್ತಿರುವ ದೃಶ್ಯ.   

ನವದೆಹಲಿ: ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ದೆಹಲಿಯ ಹಲವು ಸಣ್ಣ ಆಸ್ಪತ್ರೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಗುರುವಾರ ಬೆಳಿಗ್ಗೆ ತಮ್ಮಲ್ಲಿ ದಾಖಲಾಗಿರುವ ಕೊರೊನಾ ರೋಗಿಗಳಿಗೆ ಆಮ್ಲಜನಕ ಪೂರೈಕೆಸಲು ಇವುಗಳು ಹರಸಾಹಸ ಪಡುತ್ತಿದುದು ಕಂಡುಬಂತು.

ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಿರುವ ನಡುವೆ, ದೆಹಲಿಯ ಬಹುತೇಕ ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕದ ಕೊರತೆ ಎದುರಿಸುತ್ತಿವೆ. ಈ ನಡುವೆ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ರಾತ್ರೋ ರಾತ್ರಿ ಆಮ್ಲಜನಕ ಸರಬರಾಜಾಗುತ್ತಿದೆ.

ಬುಧವಾರ ದೆಹಲಿ ಹೈಕೋರ್ಟ್‌, ‘ರಾಜ್ಯ ಸರ್ಕಾರಗಳಿಗೆ ಮನುಷ್ಯನ ಜೀವ ಮುಖ್ಯವಲ್ಲ‘ ಎಂದು ಹೇಳಿತ್ತು. ನಂತರ ‘ಆಮ್ಲಜನಕದ ಕೊರತೆ ಎದುರಿಸುತ್ತಿರುವ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸಬೇಕು’ ಎಂದು ಆದೇಶಿಸಿತ್ತು.

ADVERTISEMENT

ಈ ಸಂದರ್ಭದಲ್ಲಿ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ದೆಹಲಿಗೆ 480 ಮೆಟ್ರಿಕ್ ಟನ್ ಆಮ್ಲಜನಕವನ್ನು ಮೀಸಲಿರಿಸಲಾಗಿದ್ದು, ಅದನ್ನು ಯಾವುದೇ ಅಡೆತಡೆಯಿಲ್ಲದೇ ಪೂರೈಸುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು.

ಈ ಭರವಸೆಯ ನಂತರವೂ ದೆಹಲಿಯ ಕೆಲವು ಖಾಸಗಿ ಆಸ್ಪತ್ರೆಗಳು ‘ನಮ್ಮ ಆಸ್ಪತ್ರೆಗೆ ಆಮ್ಲಜನಕ ತಲುಪಿಲ್ಲ‘ ಎಂದು ದೂರಿವೆ. 210 ಹಾಸಿಗೆ ಸಾಮರ್ಥ್ಯವಿರುವ ಮಾತಾ ಚನ್ನಾದೇವಿ ಆಸ್ಪತ್ರೆಯವರು, ‘ಆಮ್ಲಜನಕ ಪೂರೈಕೆದಾರರು ನಮಗೆ ನೀಡಿದ ಭರವಸೆಯನ್ನೂ ಈಡೇರಿಸಿಲ್ಲ‘ ಎಂದು ದೂರಿದ್ದಾರೆ.

‘ನಮ್ಮ ಆಸ್ಪತ್ರೆಯ ಐಸಿಯುನಲ್ಲಿ 40 ರೋಗಿಗಳಿದ್ದಾರೆ. ನಮಗೆ ಕಳೆದ ರಾತ್ರಿವರೆಗೆ 500 ಕೆಜಿ ಆಮ್ಲಜನಕ ಪೂರೈಕೆಯಾಗಿದೆ. ಬೆಳಿಗ್ಗೆ 4 ಗಂಟೆ ಹೊತ್ತಿಗೆ ಇನ್ನಷ್ಟು ಆಮ್ಲಜನಕವನ್ನು ಪೂರೈಸುವುದಾಗಿ ಆಮ್ಲಜನಕ ವಿತರಕರು ಭರವಸೆ ನೀಡಿದ್ದರು. ಆದರೆ, ಈಗ ಅವರು ನಮ್ಮ ದೂರವಾಣಿ ಕರೆಯನ್ನೇ ಸ್ವೀಕರಿಸುತ್ತಿಲ್ಲ‘ ಎಂದು ಆಸ್ಪತ್ರೆಯ ಐಸಿಯು ಮುಖ್ಯಸ್ಥ ಡಾ. ಎ.ಸಿ.ಶುಕ್ಲಾ ಹೇಳಿದರು.

‘ದೆಹಲಿ ಸರ್ಕಾರದ ಮಧ್ಯಪ್ರವೇಶದಿಂದಾಗಿ 21 ಡಿ ಟೈಪ್ ಆಕ್ಸಿಜನ್ ಸಿಲಿಂಡರ್‌ಗಳು ದೊರೆತಿವೆ. ಪರಿಸ್ಥಿತಿ ತೀರ ಗಂಭೀರವಾಗಿರುವುದರಿಂದ ಇದೇ ರೀತಿ ನಿರಂತರವಾಗಿ ಆಮ್ಲಜನಕ ಪೂರೈಕೆಯಾಗಬೇಕು‘ ಎಂದು ಅವರು ಹೇಳಿದರು.

50 ಹಾಸಿಗೆ ಸಾಮರ್ಥ್ಯ ಹೊಂದಿರುವ ಧರಂವೀರ್ ಸೋಲಂಕಿ ಆಸ್ಪತ್ರೆಯ ವೈದ್ಯ ಡಾ. ಪಂಕಜ್‌ ಸೋಲಂಕಿ, ‘ನಾವು ತುರ್ತು ಸಮಯಕ್ಕಾಗಿ ಇಟ್ಟುಕೊಂಡಿದ್ದ ಆಮ್ಲಜನಕವನ್ನು ಬಳಸುತ್ತಿದ್ದೇವೆ. ಅದು ಗುರುವಾರ ಮಧ್ಯಾಹ್ನದವರೆಗೆ ಇರುತ್ತದೆ. ಆಮ್ಲಜನಕದ ಕೊರತೆ ಕಾರಣ, ನಮ್ಮ ಆಸ್ಪತ್ರಯೆಲ್ಲಿರುವ 30 ರೋಗಿಗಳನ್ನು ಬೇರೆ ಕಡೆಗೆ ವರ್ಗಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ‘ ಎಂದು ಹೇಳಿದರು.

ದೊಡ್ಡ ಆಸ್ಪತ್ರೆಗಳು ರಾತ್ರೋರಾತ್ರಿ ಆಮ್ಲಜನಕದ ಹೊಸ ದಾಸ್ತಾನನ್ನು ಸ್ವೀಕರಿಸಿವೆ. ಶೀಘ್ರದಲ್ಲೇ ಇನ್ನಷ್ಟು ಬರುವ ಸಾಧ್ಯತೆ ಇದೆ ಎಂದು ಹೇಳಿದರು.

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುರೇಶ್ ಕುಮಾರ್, ‘ಬುಧವಾರ ರಾತ್ರಿ ಆಮ್ಲನಜಕದ ಮೂರು ಟ್ಯಾಂಕರ್‌ಗಳು ನಮ್ಮ ಆಸ್ಪತ್ರೆ ತಲುಪಿವೆ. ಇನ್ನಷ್ಟು ಬರುವ ಸಾಧ್ಯತೆ ಇದೆ‘ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.