ADVERTISEMENT

ಈಗ ಕರುಳಿನಲ್ಲೂ ಪತ್ತೆಯಾಗಿದೆ ಕಪ್ಪು ಶಿಲೀಂಧ್ರ! ದೆಹಲಿಯಲ್ಲೇ 2 ಪ್ರಕರಣ

ಪಿಟಿಐ
Published 23 ಮೇ 2021, 11:44 IST
Last Updated 23 ಮೇ 2021, 11:44 IST
ಕಪ್ಪು ಶಿಲೀಂಧ್ರದ ಸೋಂಕಿಗೆ ಒಳಗಾದ ವ್ಯಕ್ತಿಯೊಬ್ಬರ ವೈದ್ಯಕೀಯ ವರದಿ ಪರಿಶೀಲಿಸುತ್ತಿರುವ ವೈದ್ಯರು (ಪಿಟಿಐ)
ಕಪ್ಪು ಶಿಲೀಂಧ್ರದ ಸೋಂಕಿಗೆ ಒಳಗಾದ ವ್ಯಕ್ತಿಯೊಬ್ಬರ ವೈದ್ಯಕೀಯ ವರದಿ ಪರಿಶೀಲಿಸುತ್ತಿರುವ ವೈದ್ಯರು (ಪಿಟಿಐ)   

ದೆಹಲಿ: ದೆಹಲಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ರೋಗಿಗಳಿಗೆ ಕಪ್ಪು ಶಿಲೀಂಧ್ರ ಸೋಂಕು ಉಂಟಾಗಿದೆ. ಈ ಇಬ್ಬರ ಸಣ್ಣ ಕರುಳಿನಲ್ಲಿ ಕಪ್ಪು ಶಿಲೀಂಧ್ರ ಪತ್ತೆಯಾಗಿದೆ. ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ.

ಕಪ್ಪು ಶಿಲೀಂಧ್ರ ರೋಗ ಅಥವಾ ಮ್ಯೂಕರ್‌ಮೈಕೊಸಿಸ್ ಸಾಮಾನ್ಯವಾಗಿ ಮೂಗು, ಬಾಯಿ, ಕಣ್ಣು, ಮಿದುಳು ಮತ್ತು ಶ್ವಾಸಕೋಶಕ್ಕೆ ತಗುಲುವ ಸೋಂಕಾಗಿದೆ. ಆದರೆ, ಜಿಐ (ಗ್ಯಾಸ್ಟ್ರೋಇಂಟಸ್ಟೈನಲ್‌) ಮ್ಯೂಕರ್‌ಮೈಕೊಸಿಸ್ ಬಹಳ ಅಪರೂಪದ ಕಾಯಿಲೆಯಾಗಿದೆ. ಹೊಟ್ಟೆ ಅಥವಾ ದೊಡ್ಡ ಕರುಳಿನಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ ಎಂದು ಗಂಗಾ ರಾಮ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

56 ವರ್ಷದ ದೆಹಲಿ ನಿವಾಸಿ, ತಮ್ಮ ಪತ್ನಿ ಸೇರಿದಂತೆ ಕುಟುಂಬದ ಮೂವರನ್ನು ಕೋವಿಡ್‌ನಿಂದಾಗಿ ಕಳೆದುಕೊಂಡಿದ್ದಾರೆ. ಅವರೂ ಕೂಡ ಕೊರೊನಾ ವೈರಸ್‌ ಸೋಂಕಿಗೆ ಗುರಿಯಾಗಿದ್ದು, ಆರಂಭದಲ್ಲಿ ಅವರ ರೋಗದ ಲಕ್ಷಣಗಳು ಕಡಿಮೆ ಇದ್ದವು. ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ತಮ್ಮ ಪತ್ನಿಯ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಂಡಿರಲಿಲ್ಲ.

ADVERTISEMENT

ಅವರ ಹೊಟ್ಟೆ ನೋವನ್ನು ಆರಂಭದಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ಎಂದು ಪರಿಗಣಿಸಲಾಗಿತ್ತು. ಹೀಗಾಗಿ ಚಿಕಿತ್ಸೆ ಮೂರು ದಿನ ವಿಳಂಬವಾಗಿದೆ. ನಂತರ ಅವರನ್ನು ಗ್ಯಾಸ್ಟ್ರೋಎಂಟರಾಲಜಿ (ಉದರ) ವಿಭಾಗದ ತಜ್ಞರು ಪರಿಶೀಲಿಸಿದ್ದಾರೆ. ಸಿಟಿ ಸ್ಕ್ಯಾನ್‌ ಮಾಡಿದಾಗ ಅವರ ಸಣ್ಣ ಕರುಳಿನ ಮುಂಭಾಗದಲ್ಲಿ ರಂಧ್ರವಾಗಿರುವುದು ಗೋಚರಿಸಿದೆ. ಅವರಿಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿದೆ. ಇದೇ ವೇಳೆ, ಕೋವಿಡ್‌ನಿಂದಾಗಿ ಅವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ.

ರೋಗಿಗೆ ಬ್ಯಾಕ್ಟೀರಿಯಾ ನಿರೋಧಕ ಚಿಕಿತ್ಸೆ ಆರಂಭಿಸಲಾಗಿದೆ. ಕರುಳಿನ ಭಾಗವನ್ನು ಬಯಾಪ್ಸಿ ಪರೀಕ್ಷೆಗೂ ಕಳುಹಿಸಲಾಗಿದೆ.

ಮತ್ತೊಂದು ಪ್ರಕರಣ

ಕೋವಿಡ್‌ಗೆ ಗುರಿಯಾಗಿ, ಸ್ಟಿರಾಯ್ಡ್‌ ಚಿಕಿತ್ಸೆ ಪಡೆಯುತ್ತಿದ್ದ 68 ವರ್ಷದ ವ್ಯಕ್ತಿಗೆ ಹೊಟ್ಟೆಯಲ್ಲಿ ಸಣ್ಣ ಪ್ರಮಾಣದ ನೋವು ಕಾಣಿಸಿಕೊಂಡಿತ್ತು. ಸಿ.ಟಿ ಸ್ಕ್ಯಾನ್‌ ಮಾಡಿದಾಗ ಇವರ ಕರುಳಿನಲ್ಲೂ ಸಣ್ಣ ರಂಧ್ರವೊಂದು ಕಾಣಿಸಿಕೊಂಡಿದೆ.

ಆತಂಕ ಮೂಡಿಸಿದ ಬಯಾಪ್ಸಿ ವರದಿ

ಇಬ್ಬರ ಕರುಳಿನ ಮಾದರಿಯನ್ನೂ ಬಯಾಪ್ಸಿ ಪರೀಕ್ಷೆಗೆ ರವಾನಿಸಲಾಗಿತ್ತು. ಕರುಳಿನಲ್ಲಿ ಕಪ್ಪು ಶಿಲೀಂಧ್ರ- ಮ್ಯೂಕರ್‌ಮೈಕೋಸಿಸ್ ಸೋಂಕು ಪತ್ತೆಯಾಗಿದೆ. ಇಬ್ಬರೂ ಕೋವಿಡ್‌ ರೋಗಿಗಳಾಗಿದ್ದು, ಅವರಿಗೆ ಮಧುಮೇಹ ಇತ್ತು. ಇವರಲ್ಲಿ ಒಬ್ಬರು ಮಾತ್ರ ಆಕ್ಸಿಜನ್‌ ಪಡೆದುಕೊಂಡಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಕರುಳಿನಲ್ಲಿ ಕಾಣಿಸಿಕೊಳ್ಳುವ ಕಪ್ಪು ಶಿಲೀಂಧ್ರ ವಿರಳಾತಿವಿರಳ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.