ADVERTISEMENT

ಗೋವಾದ ಬೀದಿಯಲ್ಲಿ ಗಲಾಟೆ ಆರೋಪ: ಮಹಾ SP ಶಾಸಕ ಅಬು ಅಜ್ಮಿ ಪುತ್ರ ವಿರುದ್ಧ ಪ್ರಕರಣ

ಪಿಟಿಐ
Published 5 ಮಾರ್ಚ್ 2025, 14:07 IST
Last Updated 5 ಮಾರ್ಚ್ 2025, 14:07 IST
<div class="paragraphs"><p>ನಟಿ ಆಯೇಷಾ ಟಾಕಿಯಾ ಮತ್ತು ಅಬು ಫರಾನ್ ಅಜ್ಮಿ</p></div>

ನಟಿ ಆಯೇಷಾ ಟಾಕಿಯಾ ಮತ್ತು ಅಬು ಫರಾನ್ ಅಜ್ಮಿ

   

ಎಕ್ಸ್ ಚಿತ್ರ

ಪಣಜಿ: ಗೋವಾದ ಪಣಜಿಯ ಸಾರ್ವಜನಿಕ ಸ್ಥಳದಲ್ಲಿ ಬಡಿದಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ಪುತ್ರ ಅಬು ಫರಾನ್ ಅಜ್ಮಿ ವಿರುದ್ಧ ಗೋವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ವಾಹನ ಚಾಲನೆ ಸಂದರ್ಭದಲ್ಲಿ ಗುಂಪೊಂದು ಕೆಣಕಿ, ಗಲಾಟೆ ನಡೆಸಿದ ಪ್ರಕರಣದಲ್ಲಿ ಫರಾನ್‌ ಭಾಗಿಯಾಗಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸಿ, ಬಂದೂಕು ಪ್ರದರ್ಶಿಸಿದ ಆರೋಪ ಅವರ ಮೇಲಿದೆ.

ನಟಿ ಆಯೇಷಾ ಟಾಕಿಯಾ ಪತಿಯಾಗಿರುವ ಫರಾನ್‌ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ‘ಅದೊಂದು ಸಣ್ಣ ಪ್ರಕರಣವಾಗಿತ್ತು. ಆದರೆ ನನ್ನ ಮೇಲೆ ಗುಂಪೊಂದು ಅವಾಚ್ಯವಾಗಿ ನಿಂದಿಸಿ ಮುಗಿ ಬಿತ್ತು. ಪ್ರಕರಣದ ಗಂಭೀರತೆ ಅರಿತ ನಾನು ಪೊಲೀಸರಿಗೆ ಕರೆ ಮಾಡಿದೆ’ ಎಂದಿದ್ದಾರೆ.

‘ಬಂದೂಕನ್ನು ನಾನು ಪ್ರದರ್ಶಿಸಿರಲಿಲ್ಲ. ಕಳೆದ 20 ವರ್ಷಗಳಿಂದ ನಾನು ಗೋವಾಕ್ಕೆ ಭೇಟಿ ನೀಡುತ್ತಿದ್ದೇನೆ. ಅಂಥ ಕೆಲಸ ಮಾಡುವ ವ್ಯಕ್ತಿ ನಾನಲ್ಲ. ಗೋವಾ ರಾಜ್ಯವೂ ನನ್ನ ಮನೆ ಇದ್ದಂತೆ. ಗೋವಾ ಬೆಳೆಯಬೇಕು ಎಂಬುದು ನನ್ನ ಇಚ್ಛೆಯೂ ಹೌದು. ಇಲ್ಲಿ ನನಗೆ ಸಾಕಷ್ಟು ಜನ ಸ್ನೇಹಿತರಿದ್ದಾರೆ. ಅವರೆಲ್ಲರೂ ನನ್ನನ್ನು ಬೆಂಬಲಿಸುವವರೇ’ ಎಂದು ಹೇಳಿದ್ದಾರೆ.

‘ಈ ಪ್ರಕರಣದಲ್ಲಿ ಪೊಲೀಸರು ಸಾಕಷ್ಟು ಸಹಕರಿಸಿದ್ದಾರೆ. ನಾನೂ ಅವರೊಂದಿಗೆ ಉತ್ತಮವಾಗಿ ವ್ಯವಹರಿಸಿದ್ದೇನೆ. ಆದರೆ ನಾನು ಗೋವಾ ರಾಜ್ಯ ವಿರುದ್ಧ ಎಂದು ಸುಳ್ಳು ಹರಡಬೇಡಿ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಿದ್ದರೂ ನಾನು ಬೇಕಿದ್ದರೆ ಕ್ಷಮೆ ಕೋರುವೆ. ಗೋವಾವನ್ನು ಪ್ರೀತಿಸುವ ನಾನು, ಇಲ್ಲಿನ ಪೊಲೀಸರ ಕುರಿತೂ ಅಷ್ಟೇ ಗೌರವ ಹೊಂದಿದ್ದೇನೆ’ ಎಂದು ಮನವಿ ಮಾಡಿಕೊಂಡಿದ್ದಾರೆ.

ಮೊಘಲ್ ದೊರೆ ಔರಂಗಜೇಬ್‌ನನ್ನು ಹೊಗಳಿ ವಿವಾದಕ್ಕೆ ಗುರಿಯಾಗಿರುವ ಸಮಾಜವಾದಿ ಪಕ್ಷದ ಶಾಸಕ ಅಬು ಆಸಿಂ ಆಜ್ಮಿ ಅವರನ್ನು ಮಾರ್ಚ್‌ 26ರವರೆಗೆ ನಡೆಯಲಿರುವ ಮಹಾರಾಷ್ಟ್ರ ವಿಧಾನಮಂಡಳ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.