ADVERTISEMENT

ಸ್ಮೃತಿ ಇರಾನಿ ಮಗಳು ಗೋವಾದ ಬಾರ್ ಮಾಲೀಕತ್ವ ಹೊಂದಿದಂತೆ ತೋರುತ್ತಿಲ್ಲ: ಹೈಕೋರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2022, 14:41 IST
Last Updated 1 ಆಗಸ್ಟ್ 2022, 14:41 IST
ಸ್ಮೃತಿ ಇರಾನಿ
ಸ್ಮೃತಿ ಇರಾನಿ   

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಗಳು ಗೋವಾದ ರೆಸ್ಟೋರೆಂಟ್ ಹಾಗೂ ಬಾರ್‌ನ ಮಾಲೀಕತ್ವವನ್ನು ಹೊಂದಿದಂತೆ ತೋರುತ್ತಿಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ತಿಳಿಸಿದೆ.

ಸ್ಮೃತಿ ಇರಾನಿ ಮಗಳು ಗೋವಾದಲ್ಲಿ ಅಕ್ರಮ ಬಾರ್‌ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ, ನೆಟ್ಟಾ ಡಿಸೋಜಾ ಮತ್ತು ಇತರರು ಗಂಭೀರ ಆರೋಪ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಲಯ, ‘ಸ್ಮೃತಿ ಇರಾನಿ ವಿರುದ್ಧ ಸುಳ್ಳು ಹಾಗೂ ವೈಯಕ್ತಿಕ ದಾಳಿಯನ್ನು ನಡೆಸಲಾಗಿತ್ತು. ಇದೊಂದು ಪಿತೂರಿ’ ಎಂದು ಅಭಿಪ್ರಾಯಪಟ್ಟಿದೆ.

ADVERTISEMENT

‘ದಾಖಲೆಗಳನ್ನು ಪರಿಶೀಲಿಸಿದಾಗ, ಇರಾನಿ ಮಗಳಿಗೆ ಬಾರ್‌ ನಡೆಸಲು ಯಾವುದೇ ಪರವಾನಗಿ ನೀಡಲಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅವರ ಮಗಳು ರೆಸ್ಟೋರೆಂಟ್‌ನ ಮಾಲೀಕರಲ್ಲ’ ಎಂದು ಕೋರ್ಟ್‌ ಹೇಳಿದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಗಳು ಝೋಯಿಶ್‌ ಇರಾನಿ ಅವರು ಮೃತರೊಬ್ಬರ ಹೆಸರಿನಲ್ಲಿ ಗೋವಾದಲ್ಲಿ ಬಾರ್‌ವೊಂದನ್ನು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ, ‘2021 ಮೇ ತಿಂಗಳಿನಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಹೆಸರಿನಲ್ಲಿ 2022 ಜೂನ್‌ನಲ್ಲಿ ಪರವಾನಗಿ ಪಡೆದುಕೊಳ್ಳಲಾಗಿದೆ’ ಎಂದು ಹೇಳಿದ್ದರು.

‘ಒಂದು ರೆಸ್ಟೋರೆಂಟ್‌ಗೆ ಒಂದೇ ಬಾರ್‌ ಪರವಾನಗಿ ಎಂಬ ನಿಯಮ ಗೋವಾದಲ್ಲಿದೆ. ಆದರೆ ಇರಾನಿ ಅವರ ಮಗಳು ನಡೆಸುತ್ತಿರುವ ಸಿಲ್ಲಿ ಸೋಲ್ಸ್‌ ಕೆಫೆ ರೆಸ್ಟೋರೆಂಟ್‌ಗೆ ಎರಡು ಬಾರ್‌ ಪರವಾನಗಿ ಇದೆ. ಸ್ಮೃತಿ ಅವರ ಗಮನಕ್ಕೆ ಬಾರದೆಯೇ ಪರವಾನಗಿ ಪಡೆದುಕೊಳ್ಳಲಾಗಿದೆಯೇ’ ಎಂದು ಕಾಂಗ್ರೆಸ್‌ ಪ್ರಶ್ನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.