ADVERTISEMENT

ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ: ರಾಹುಲ್ ಹೇಳಿಕೆ ವಿರುದ್ಧ ಸಿಡಿದ ಸ್ಮೃತಿ

ಪಿಟಿಐ
Published 9 ಆಗಸ್ಟ್ 2023, 10:18 IST
Last Updated 9 ಆಗಸ್ಟ್ 2023, 10:18 IST
ಕೇಂದ್ರ ಸಚಿವೆ ಸ್ಮೃತಿ ಇರಾನಿ
ಕೇಂದ್ರ ಸಚಿವೆ ಸ್ಮೃತಿ ಇರಾನಿ   ಪಿಟಿಐ ಚಿತ್ರ

ನವದೆಹಲಿ: ಮಣಿಪುರದಲ್ಲಿ ಬಿಜೆಪಿಯ ರಾಜಕೀಯ ‘ಭಾರತ ಮಾತೆಯನ್ನು ಕೊಲೆ ಮಾಡಿದೆ’ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಸಂಸದೀಯ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಹೇಳಿಕೆ ನೀಡಿರುವುದು ಇದೇ ಮೊದಲು ಎಂದಿದ್ದಾರೆ.

ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿದ್ದ ರಾಹುಲ್ ಗಾಂಧಿ, ಮಣಿಪುರದಲ್ಲಿ ಬಿಜೆಪಿಯ ರಾಜಕಾರಣ ಭಾರತ ಮಾತೆಯನ್ನು ಕೊಂದಿದೆ ಎಂದು ಹೇಳಿದ್ದರು. ಅಲ್ಲದೆ, ಬಿಜೆಪಿ ಸದಸ್ಯರನ್ನು ದೇಶದ್ರೋಹಿಗಳು ಎಂದು ಕಿಡಿಕಾರಿದ್ದರು.

ರಾಹುಲ್ ಮಾತು ಮುಗಿಸುತ್ತಿದ್ದಂತೆ ಮಾತಿಗಿಳಿದ ಸ್ಮೃತಿ ಇರಾನಿ, ಮಣಿಪುರ ಭಾರತದ ಅವಿಭಾಜ್ಯ ಅಂಗ ಎಂದರು.

ADVERTISEMENT

‘ಲೋಕಸಭೆಯಲ್ಲಿ ರಾಹುಲ್ ಧೋರಣೆಯನ್ನು ನಾನು ಖಂಡಿಸುತ್ತೇನೆ. ಭಾರತ ಮಾತೆಯ ಹತ್ಯೆ ಬಗ್ಗೆ ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿ ಮಾತನಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಸದಸ್ಯರು ಮೇಜನ್ನು ತಟ್ಟಿ ಬೆಂಬಲ ಸೂಚಿಸಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

'ಮಣಿಪುರ ಇಬ್ಭಾಗವಾಗಿಲ್ಲ, ಅದು ಈ ದೇಶದ ಭಾಗವಾಗಿದೆ. ಅವರ (ವಿರೋಧ ಪಕ್ಷಗಳ) ಮೈತ್ರಿಕೂಟದ ಸದಸ್ಯರೊಬ್ಬರು ತಮಿಳುನಾಡಿನಲ್ಲಿ ಭಾರತ ಎಂದರೆ ಉತ್ತರ ಭಾರತ ಎಂದು ಹೇಳಿದ್ದಾರೆ. ಧೈರ್ಯವಿದ್ದರೆ ರಾಹುಲ್ ಗಾಂಧಿ ಈ ಬಗ್ಗೆ ಪ್ರತಿಕ್ರಿಯಿಸಲಿ. ಮತ್ತೊಬ್ಬ ಕಾಂಗ್ರೆಸ್ ನಾಯಕ ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹದ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕತ್ವದ ಆದೇಶದಂತೆ ಈ ಹೇಳಿಕೆ ನೀಡಲಾಗಿದೆಯೇ?’ ಎಂದು ಅವರು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆಯನ್ನು ಪ್ರಸ್ತಾಪಿಸಿದ ಅವರು, ‘ನಾನು ಕೀಲು ನೋವಿನ ಬಗ್ಗೆ ಮಾತನಾಡುವುದಿಲ್ಲ ... ಕಣಿವೆ ರಾಜ್ಯ ರಕ್ತದಿಂದ ತೊಯ್ದಿರುವುದನ್ನು ದೇಶ ಕಂಡಿದೆ, ಅವರು(ಕಾಂಗ್ರೆಸ್ ನಾಯಕರು) ಅಲ್ಲಿಗೆ ಹೋದಾಗಲ್ಲೆಲ್ಲ ಹಿಮದ ಚೆಂಡುಗಳೊಂದಿಗೆ ಆಟವಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು 370 ನೇ ವಿಧಿಯಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆದ ಬಳಿಕ ಇದು ಸಾಧ್ಯವಾಗಿದೆ’ಎಂದು ಹೇಳಿದರು.

‘ಭಾರತ್ ಜೋಡೊ ಯಾತ್ರೆಯ ಸಂದರ್ಭದಲ್ಲಿ ಅವರು(ಕಾಂಗ್ರೆಸ್ ನಾಯಕರು) 370ನೇ ವಿಧಿ ಅಡಿಯಲ್ಲಿ ಬರುವ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ. ಅದು ಸಾಧ್ಯವಿಲ್ಲ’ಎಂದು ಸ್ಮೃತಿ ಸ್ಪಷ್ಟಪಡಿಸಿದರು.

ತುರ್ತು ಪರಿಸ್ಥಿತಿಯ ಭೀಕರತೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕಾಂಗ್ರೆಸ್ ಪಕ್ಷದ ಇತಿಹಾಸದ ಮೇಲೆ ರಕ್ತದ ಕಲೆ ಇದೆ ಎಂದು ಹೇಳಿದರು. 1984ರ ಸಿಖ್ ವಿರೋಧಿ ದಂಗೆ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಕಾಶ್ಮೀರದಲ್ಲಿನ ಅಶಾಂತಿಯ ವಾತಾವರಣದ ವಿಷಯಗಳನ್ನೂ ಅವರು ಪ್ರಸ್ತಾಪಿಸಿದರು.

ಇದನ್ನೂ ಓದಿ..

ಬಿಜೆಪಿಯ ರಾಜಕಾರಣದಿಂದ ಮಣಿಪುರದಲ್ಲಿ 'ಭಾರತ ಮಾತೆ'ಯ ಕೊಲೆ: ರಾಹುಲ್ ಗಾಂಧಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.