ADVERTISEMENT

ಮನೆಗೆ ಹಾವು ಬಂದದ್ದಕ್ಕೆ ಸಿ.ಎಂಗೇ ಕರೆ ಮಾಡಿದರು!

ಹಿಮಾಚಲ ಪ್ರದೇಶದ ಮಂಡಿ ಪ್ರದೇಶದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2018, 19:30 IST
Last Updated 3 ಸೆಪ್ಟೆಂಬರ್ 2018, 19:30 IST
ನಾಗರಹಾವು (ಸಾಂಕೇತಿಕ ಚಿತ್ರ)
ನಾಗರಹಾವು (ಸಾಂಕೇತಿಕ ಚಿತ್ರ)   

ಶಿಮ್ಲಾ: ಇಲ್ಲಿನ ಮಂಡಿ ಪ್ರದೇಶದ ಮನೆಯೊಂದಕ್ಕೆ ಮಧ್ಯರಾತ್ರಿ ನಾಗರಹಾವು ಬಂದಿದ್ದರಿಂದ ತೀವ್ರ ಆತಂಕಗೊಂಡ ಕುಟುಂಬದವರು, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಂ ಠಾಕೂರ್ ಅವರಿಗೇ ಕರೆ ಮಾಡಿದ್ದಾರೆ.

ನಿಪುಣ್‌ ಮಲ್ಹೋತ್ರ ಅವರಿಗೆ ತಮ್ಮ ಮನೆಯಲ್ಲಿ ಮಧ್ಯರಾತ್ರಿ ಏನೋ ತೆವಳಿಕೊಂಡು ಹೋಗುತ್ತಿರುವಂತೆ ಭಾಸವಾಗಿದೆ. ಬಳಿಕ ಮನೆಯಲ್ಲಿದ್ದವರೆಲ್ಲ ಎದ್ದು ನೋಡಿದರೆ ಅಚ್ಚರಿ ಕಾದಿತ್ತು. ದೊಡ್ಡ ನಾಗರಹಾವು ಅಲ್ಲಿತ್ತು. ತಕ್ಷಣವೇ ನೆರವಿಗಾಗಿ ಮಲ್ಹೋತ್ರ, ಅರಣ್ಯ ಮತ್ತು ವನ್ಯಜೀವಿ ಇಲಾಖೆಗೆ ಕರೆ ಮಾಡಿದರು. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ತಕ್ಷಣ ಅವರು ಮುಖ್ಯಮಂತ್ರಿಗೆ ಕರೆ ಮಾಡಿದರು. ಕರೆ ಸ್ವೀಕರಿಸಿದ ಠಾಕೂರ್, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮಂಡಿ ಜಿಲ್ಲಾಧಿಕಾರಿಗೆ ಕರೆ ಮಾಡಿದ ಅವರು, ಆತಂಕದಲ್ಲಿರುವ ಕುಟುಂಬದ ನೆರವಿಗೆ ಧಾವಿಸುವಂತೆ ತಿಳಿಸಿದರು.

ಹಾವು ಹಿಡಿಯುವ ವ್ಯಕ್ತಿಯು ಮಲ್ಹೋತ್ರ ಅವರ ಮನೆಗೆ ಬರುವಂತೆ ಜಿಲ್ಲಾಧಿಕಾರಿಯು ಆ ಕೂಡಲೇ ವ್ಯವಸ್ಥೆ ಮಾಡಿದರು. ಆತ ಮನೆಗೆ ಬಂದು ಹಾವು ಹಿಡಿದ ನಂತರ ಮನೆಯವರೆಲ್ಲ ನಿಟ್ಟುಸಿರು ಬಿಟ್ಟರು. ಮಲ್ಹೋತ್ರ ಕುಟುಂಬದವರು ಮುಖ್ಯಮಂತ್ರಿ ಠಾಕೂರ್ ಅವರಿಗೆ ಪರಿಚಿತರು ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.