
ಆಲಪ್ಪುಳ/ಕೊಟ್ಟಾಯಂ: ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ (ಎಸ್‌ಎನ್‌ಡಿಪಿ) ಜೊತೆಗಿನ ಮೈತ್ರಿಯಿಂದ ಹೊರ ನಡೆಯುವುದಾಗಿ ನಾಯರ್ ಸರ್ವೀಸ್ ಸೊಸೈಟಿ(ಎನ್‌ಎಸ್‌ಎಸ್) ನಿರ್ಧಾರ ಕೈಗೊಂಡಿರುವುದದಕ್ಕೆ ಎಸ್‌ಎನ್‌ಡಿಪಿ ನಾಯಕ ವೇಲಪ್ಪಳ್ಳಿ ನಟೇಶನ್ ಅವರು ಬೇಸರ ವ್ಯಕ್ತಪಡಿಸಿದರು.
‘ನನ್ನ ಕೆಲವು ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿ ಎರಡು ಸಂಘಟನೆ ನಡುವಣ ಐಕ್ಯತೆಯನ್ನು ದುರ್ಬಲಗೊಳಿಸುವ ಯತ್ನಗಳು ನಡೆಯುತ್ತಿವೆ. ಎಸ್‌ಎನ್‌ಡಿಪಿಯನ್ನು ಮುಸ್ಲಿಂ ವಿರೋಧಿಯನ್ನಾಗಿ ಬಿಂಬಿಸುವ ಯತ್ನಗಳೂ ನಡೆದಿವೆ’ ಎಂದು ಎಂದು ಅವರು ಬುಧವಾರ ಆರೋಪಿಸಿದರು.
ಎನ್‌ಎಸ್‌ಎಸ್ ಸಂಘಟನೆಯು ನಾಯರ್ ಸಮುದಾಯವನ್ನು ಪ್ರತಿನಿಧಿಸಿದರೆ, ಎಸ್‌ಎನ್‌ಡಿಪಿಯು ಈಳವ ಸಮುದಾಯವನ್ನು ಪ್ರತಿನಿಧಿಸುತ್ತದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಟೇಶನ್ ಅವರು, ‘ಎನ್‌ಎಸ್ಎಸ್ ಪ್ರಧಾನ ಕಾರ್ಯದರ್ಶಿ ಸುಕುಮಾರನ್ ನಾಯರ್ ಅವರು ಮುಗ್ಧರು, ಸಭ್ಯರು ಮತ್ತು ನಿಸ್ವಾರ್ಥಿ. ಒತ್ತಡಕ್ಕೆ ಒಳಗಾಗಿ ಅವರು ಮೈತ್ರಿಯಿಂದ ಹೊರ ನಡೆದಿದ್ದಾರೆ’ ಎಂದು ಹೇಳಿದರು.
‘ಇದಕ್ಕಾಗಿ ವ್ಯಥೆ ಪಡುವುದೂ ಇಲ್ಲ ಅಥವಾ ಪ್ರತಿಭಟನೆ ನಡೆಸುವುದೂ ಇಲ್ಲ. ನಾಯರ್ ಸಮುದಾಯವೂ ಸಹೋದರ ಸಮುದಾಯ. ಎನ್‌ಎಸ್‌ಎಸ್ ಮತ್ತು ಅದರ ನಾಯಕರನ್ನು ಟೀಕಿಸಬೇಡಿ’ ಎಂದು ಎಸ್‌ಎನ್‌ಡಿಪಿ ಸದಸ್ಯರಿಗೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.