ADVERTISEMENT

ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ ಸಲ್ಲದು: ಅಟಾರ್ನಿ ಜನರಲ್ ವೇಣುಗೋಪಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಡಿಸೆಂಬರ್ 2020, 9:20 IST
Last Updated 7 ಡಿಸೆಂಬರ್ 2020, 9:20 IST
ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌
ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌    

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳ ಮೇಲೆ ನಿರ್ಬಂಧ ಹೇರುವುದು ಮತ್ತು ಅಂತಹ ಯಾವುದೇ ಕ್ರಮಗಳು ವಿವಾದಕ್ಕೆ ಆಹ್ವಾನ ನೀಡಬಹುದಾಗಿದೆ ಎಂದು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಸೋಮವಾರ ಹೇಳಿದ್ದಾರೆ.

ಆರೋಗ್ಯ ಪೂರ್ಣ ಪ್ರಜಾಪ್ರಭುತ್ವಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿನ ಬಹಿರಂಗ ಚರ್ಚೆಗಳು ಅವಶ್ಯಕ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 'ಮಿತಿಯನ್ನು ದಾಟದ ಹೊರತು ಸಾಮಾನ್ಯವಾಗಿ ಸುಪ್ರೀಂ ಕೋರ್ಟ್‌ ಟೀಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ' ಎಂದು ಕೆ.ಕೆ.ವೇಣುಗೋಪಾಲ್‌ ಅವರು ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವಾಕ್‌ ಸ್ವಾತಂತ್ರದ ಬಗ್ಗೆ ಮಾತನಾಡಿರುವ ಅವರು, 'ಈ ಸ್ವಾತಂತ್ರವನ್ನು ನಿಯಂತ್ರಿಸಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳಬಾರದು. ನಮಗೆ ಮುಕ್ತವಾದ ಪ್ರಜಾಪ್ರಭುತ್ವ ಮತ್ತು ಬಹಿರಂಗ ಚರ್ಚೆಗಳ ಅವಶ್ಯಕತೆ ಇದೆ' ಎಂದಿದ್ದಾರೆ.

ADVERTISEMENT

'ಸುಪ್ರೀಂ ಕೋರ್ಟ್‌ ಆಡಳಿತ ಪಕ್ಷದ ಪರವಾಗಿದೆ ಹಾಗೂ ಅದರ ಅನುಕೂಲಕ್ಕೆ ತಕ್ಕಂತೆ ತೀರ್ಪು ನೀಡುತ್ತಿದೆ' ಎಂದು ಟ್ವೀಟಿಸಿದ್ದ ವ್ಯಂಗ್ಯ ಚಿತ್ರ ಕಲಾವಿದೆ ರಚಿತಾ ತನೇಜಾ ವಿರುದ್ಧ ನ್ಯಾಯಾಂಗ ನಿಂದನೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಇತ್ತೀಚೆಗಷ್ಟೇ ವೇಣುಗೋಪಾಲ್‌ ಸಮ್ಮತಿಸಿದ್ದರು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿರುದ್ಧ ಅವಹೇಳನಕಾರಿ ಸಂದೇಶ ಪ್ರಕಟಿಸಿದ್ದ ಹಾಸ್ಯ ಕಲಾವಿದ (ಸ್ಟ್ಯಾಂಡ್‌ಅಪ್ ಕಾಮಿಡಿಯನ್) ಕುಣಾಲ್‌ ಕಾಮ್ರಾ ಮೇಲೆ ನ್ಯಾಯಾಂಗ ನಿಂದನೆ ಕ್ರಮಗಳನ್ನು ಅನುಸರಿಸಲು ಕಳೆದ ತಿಂಗಳು ಅಟಾರ್ನಿ ಜನರಲ್‌ ವೇಣುಗೋಪಾಲ್‌ ಅವರು ಒಪ್ಪಿಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.