
ಮುಂಬೈ: ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ನಿಯಮಿತವು(ಎಂಎಸ್‌ಇಡಿಸಿಎಲ್) ‘ಪಿಎಂ–ಕುಸುಮ್ ಬಿ’ ಯೋಜನೆಯಡಿ ಕೇವಲ 30 ದಿನಗಳಲ್ಲಿ ರಾಜ್ಯದಾದ್ಯಂತ 45,911 ಸೌರ ಕೃಷಿ ಪಂಪ್‌ಸೆಟ್‌ಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಈ ಸಾಧನೆಯ ಮೈಲಿಗಲ್ಲು ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.
ಈ ಸಾಧನೆಯ ಮೂಲಕ ಭಾರತದಲ್ಲಿ ವೇಗವಾಗಿ ಸೌರಶಕ್ತಿ ಆಧಾರಿತ ಚಟುವಟಿಕೆಗಳನ್ನು ಅಳವಡಿಸುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ. ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಸರ್ಕಾರವೊಂದು ವೇಗವಾಗಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸೌರ ಕೃಷಿ ಪಂಪ್‌ಗಳನ್ನು ಅಳವಡಿಸುತ್ತಿರುವುದರಲ್ಲಿ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ.
ಈ ಸಾಧನೆಯು, ಕೇಂದ್ರ ಸರ್ಕಾರದ ಪಿಎಂ–ಕುಸಮ್ ಬಿ ಮತ್ತು ಮಗೇಲ್ ತ್ಯಾಲಾ ಸೌರ್ ಕೃಷಿ ಪಂಪ್ ಯೋಜನೆಗಳ (ಎಂಟಿಎಸ್‌ಕೆಪಿವೈ) ಪರಿಣಾಮಕಾರಿ ಅನುಷ್ಠಾನದ ಮೂಲಕ ಭಾರತದಲ್ಲಿ ಶುದ್ಧ ಇಂಧನದ ಪರಿವರ್ತನೆ, ರೈತರ ಜೀವನೋಪಾಯ ಸುಧಾರಣೆ ಮತ್ತು ಸುಸ್ಥಿರ ನೀರಾವರಿಯನ್ನು ಪ್ರೋತ್ಸಾಹಿಸುವ ರಾಜ್ಯ ಸರ್ಕಾರದ ಬದ್ಧತೆಯ ಪ್ರತಿಬಿಂಬವಾಗಿದೆ.
‘ರಾಜ್ಯದಾದ್ಯಂತ ಒಂದು ತಿಂಗಳಲ್ಲಿ 45,911ಕ್ಕೂ ಹೆಚ್ಚು ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಮೂಲಕ ಸೌರ ಕೃಷಿ ಚಟುವಟಿಕೆಗಳ ಅನುಷ್ಠಾನದಲ್ಲಿ ಮಹಾರಾಷ್ಟ್ರವನ್ನು, ದೇಶದ ಪ್ರಥಮ ರಾಜ್ಯವನ್ನಾಗಿ ಮಾಡಿದ್ದೇವೆ. ಈ ಸಾಧನೆಯು ಸುಸ್ಥಿರ ನೀರಾವರಿಯನ್ನು ಖಚಿತಪಡಿಸುತ್ತ್ತದೆ. ಅಷ್ಟೇ ಅಲ್ಲದೇ, ಕೃಷಿಯಲ್ಲಿ ಉತ್ಪಾದಕತೆ ಮತ್ತು ರೈತರ ಆದಾಯವನ್ನು ಸುಧಾರಿಸುತ್ತದೆ ಮತ್ತು ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ’ ಎಂದು ಮಹಾರಾಷ್ಟ್ರ ಸರ್ಕಾರದ ಇಂಧನ ಸಚಿವರೂ ಆಗಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.
ಎಂಎಸ್‌ಇಡಿಸಿಎಲ್, ರಾಜ್ಯದಾದ್ಯಂತ ಈವರೆಗೆ 7.47 ಲಕ್ಷಕ್ಕೂ ಹೆಚ್ಚು ಸೌರ ಕೃಷಿ ಪಂಪ್‌ಗಳನ್ನು ಸ್ಥಾಪಿಸಲಾಗಿದೆ. 10.45 ಲಕ್ಷ ಕೃಷಿ ಪಂಪ್‌ಗಳ ಸ್ಥಾಪನೆಯ ಗುರಿ ಹೊಂದಿದೆ. ಇದು ರಾಜ್ಯ, ದೇಶವಲ್ಲದೇ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಷ್ಠಾನಗೊಳಿಸಬಹುದಾದ ಮಾದರಿಯನ್ನು ಸೃಷ್ಟಿಸಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.