ADVERTISEMENT

ಮುಗ್ಧ ರೈತರನ್ನು ಎತ್ತಿಕಟ್ಟುವ ಪ್ರಯತ್ನ ನಡೆದಿದೆ: ಡಿ.ವಿ.ಸದಾನಂದ

ಕೃಷಿ ಮಸೂದೆ ಕುರಿತು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 16:39 IST
Last Updated 20 ಸೆಪ್ಟೆಂಬರ್ 2020, 16:39 IST
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ   

ಬೆಂಗಳೂರು: ‘ನಾಗರಿಕ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ದೇಶ ವಿರೋಧಿ ಶಕ್ತಿಗಳು ತಪ್ಪು ಮಾಹಿತಿ ನೀಡಿ ಸಮುದಾಯವೊಂದನ್ನು ಎತ್ತಿಕಟ್ಟಲು ಪ್ರಯತ್ನಿಸಿದ್ದವು. ಅದೇ ರೀತಿ ಕೃಷಿ ತಿದ್ದುಪಡಿ ಮಸೂದೆಯ ಬಗ್ಗೆಯೂ ಮುಗ್ಧ ರೈತರನ್ನು ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಸಂಸತ್ತು ಅಂಗೀಕರಿಸಿರುವ ಬೆಲೆ ಖಾತರಿ ಹಾಗೂ ಬೇಸಾಯ ಸೇವೆಗಳಿಗೆ ರೈತರ ಒಪ್ಪಿಗೆ (ಸಶಕ್ತೀಕರಣ ಮತ್ತು ರಕ್ಷಣೆ) ಮಸೂದೆಯು ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುವ ಇನ್ನಷ್ಟು ಮುಕ್ತ ಅವಕಾಶಗಳನ್ನು ಕಲ್ಪಿಸುತ್ತದೆ. ಹೊಸ ಕೃಷಿ ಮಸೂದೆಯು ರೈತರನ್ನು ಹಲವು ನಿರ್ಬಂಧಗಳಿಂದ ಮುಕ್ತವಾಗಿಸಲಿದೆ. ಉತ್ತಮ ದರ ಸಿಕ್ಕರೆ ಹೊಲದಲ್ಲೇ ಮಾರಾಟ ಮಾಡಬಹುದು. ಸಂಸ್ಕರಣಾ ಘಟಕಕ್ಕೂ ಮಾರಾಟ ಮಾಡಬಹುದು. ಸಾಗಣೆಯ ನಿರ್ಬಂಧವಿಲ್ಲದೆ ಹೊರ ರಾಜ್ಯಗಳಿಗೂ ಮಾರಾಟ ಮಾಡಬಹುದು’ ಎಂದಿದ್ದಾರೆ.

ಕೆಲವರು ಅಪಪ್ರಚಾರ ಮಾಡುತ್ತಿರುವಂತೆ ಬೆಂಬಲ ಬೆಲೆ ವ್ಯವಸ್ಥೆಯನ್ನು ಸ್ಥಗಿತಗೊಳಿಸುತ್ತಿಲ್ಲ. ಅದು ಮುಂದುವರಿಯಲಿದೆ. ಮುಂಗಾರು ಮತ್ತು ಹಿಂಗಾರು ಬಿತ್ತನೆಗೆ ಮುನ್ನವೇ ಬೆಂಬಲ ಬೆಲೆ ಘೋಷಣೆಯಾಗುತ್ತದೆ. ಬೆಲೆ ಕುಸಿದಾಗ ಸರ್ಕಾರ ಮಧ್ಯಪ್ರವೇಶಿಸಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ವ್ಯವಸ್ಥೆಯೂ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.