ADVERTISEMENT

ಪಂಜಾಬ್ ಗಡಿಯಲ್ಲಿ ಏನೋ ಅಪಾಯ ಸಂಭವಿಸುವುದರಲ್ಲಿದೆ: ಕ್ಯಾಪ್ಟನ್ ಅಮರಿಂದರ್ ಸಿಂಗ್

ಪಿಟಿಐ
Published 27 ಅಕ್ಟೋಬರ್ 2021, 16:21 IST
Last Updated 27 ಅಕ್ಟೋಬರ್ 2021, 16:21 IST
ಅಮರಿಂದರ್ ಸಿಂಗ್, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ
ಅಮರಿಂದರ್ ಸಿಂಗ್, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ   

ಚಂಡೀಗಡ: ಗಂಭೀರ ಭದ್ರತಾ ಸಮಸ್ಯೆಗಳ ಪುನರಾವರ್ತಿತ ನಿರಾಕರಣೆ ಕುರಿತಂತೆ ಪಂಜಾಬ್ ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ, ಗಡಿಯಲ್ಲಿ ಏನೋ ತಪ್ಪು ಮತ್ತು ಅಪಾಯಕಾರಿಯಾದದ್ದು ನಡೆಯುತ್ತಿದೆ. ಆದರೆ, ರಾಜ್ಯವು ಅದನ್ನು ನಿರ್ಲಕ್ಷಿಸಿದೆ ಎಂದಿದ್ದಾರೆ.

ಗಡಿ ಭದ್ರತಾ ಪಡೆ (ಬಿಎಸ್‌ಎಫ್) ರಾಜ್ಯದ ಆಡಳಿತವನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು, ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪ್ರಚಾರ ಗಿಟ್ಟಿಸಲು ಕೆಲವರು ಇಂತಹ ತಪ್ಪು ಕಲ್ಪನೆಗಳನ್ನು ಹರಡುತ್ತಿದ್ದಾರೆ ಎಂದು ಹೇಳಿದರು.

‘ನಮ್ಮದು ಗಡಿ ರಾಜ್ಯವಾಗಿರುವುದರಿಂದ ರಾಷ್ಟ್ರೀಯ ಭದ್ರತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸಹಾಯ ಮಾಡಲು ಬಿಎಸ್ಎಫ್ ಇಲ್ಲಿದೆ’ಎಂದು ಅವರು ಹೇಳಿದರು. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಕೇಂದ್ರಕ್ಕೆ ರಾಜ್ಯವು ಸಂಪೂರ್ಣ ಬೆಂಬಲವನ್ನು ನೀಡಬೇಕೆಂದು ಅವರು ಕರೆ ನೀಡಿದರು.

ADVERTISEMENT

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮರಿಂದರ್ ಸಿಂಗ್ ಅವರು, ಭಾರತೀಯ ಸೇನೆಯಲ್ಲಿನ ಅನುಭವ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅನುಭವದ ಮೇರೆಗೆ ಹೇಳುತ್ತಿದ್ದೇನೆ. ಗಡಿಯಲ್ಲಿ ‘ಏನೋ ಆಗಲಿದೆ’ಎಂದರು.

‘ಕೇವಲ ಒಂದು ತಿಂಗಳಿನಿಂದ ಗೃಹ ಸಚಿವರ ಕುರ್ಚಿಯಲ್ಲಿ ಕುಳಿತಿರುವ ಒಬ್ಬ ವ್ಯಕ್ತಿ ನನಗಿಂತ ಹೆಚ್ಚು ತಿಳಿದಿದೆ ಎಂದು ಹೇಳಿಕೊಳ್ಳುತ್ತಾರೆ!’ಎಂದು ಸುಖಜಿಂದರ್ ಸಿಂಗ್ ರಾಂಧವಾ ಅವರ ಬಗ್ಗೆ ವ್ಯಂಗ್ಯವಾಡಿದರು.

‘ಪಾಕಿಸ್ತಾನದ ಐಎಸ್‌ಐ ಮತ್ತು ಖಲಿಸ್ತಾನಿ ಪಡೆಗಳ ಸ್ಲೀಪರ್ ಸೆಲ್‌ಗಳು ಆತಂಕವನ್ನು ಸೃಷ್ಟಿಸುತ್ತಿವೆ. ಈಗ ತಂತ್ರಜ್ಞಾನವು ಹೆಚ್ಚು ಮುಂದುವರಿದಿದೆ. ಡ್ರೋನ್‌ಗಳ ಸಾಮರ್ಥ್ಯ ಮತ್ತು ವ್ಯಾಪ್ತಿ ಹೆಚ್ಚುತ್ತಿದೆ, ಮೊದಲು, ಅವು ಗಡಿಯಿಂದ ಕೇವಲ ಐದರಿಂದ ಆರು ಕಿಮೀ ದೂರಕ್ಕೆ ಬರುತ್ತಿದ್ದವು. ಈಗ 31 ಕಿಮೀ ತಲುಪುತ್ತವೆ’ಎಂದು ಹೇಳಿದರು.

ಗಡಿಯಾಚೆಗಿನ ರಹಸ್ಯ ಯುದ್ಧದ ಬಗ್ಗೆ ನಾವು ಬಹಳ ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು.

ಅಂತಹ ಬೆದರಿಕೆಗಳನ್ನು ನಿಭಾಯಿಸುವುದು ಪ್ರತಿ ಜವಾಬ್ದಾರಿಯುತ ಸರ್ಕಾರದ ಕರ್ತವ್ಯವಾಗಿದೆ ಎಂದು ಅಮರಿಂದರ್ ಸಿಂಗ್ ಒತ್ತಿ ಹೇಳಿದರು. ರಾಜ್ಯ ಸರ್ಕಾರವು ಅಪಾಯವನ್ನು ನಿರಾಕರಿಸುವ ಬದಲು ವಾಸ್ತವಾಂಶಗಳನ್ನು ಜನರ ಮುಂದಿಡಬೇಕು ಮತ್ತು ಮಾಹಿತಿ ಪಡೆಯಲು ಬಿಎಸ್‌ಎಫ್ ಸಹಾಯವನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಬೆದರಿಕೆ ವಿರುದ್ಧ ಹೋರಾಡಲು ಸ್ವಂತವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಬಗ್ಗೆ ನಡೆದ ಸರ್ವಪಕ್ಷ ಸಭೆಯಲ್ಲೂ ರಾಜಕೀಯ ಪಕ್ಷಗಳಿಗೆ ಸರಿಯಾಗಿ ಮಾಹಿತಿ ನೀಡದಿರುವುದು ಕಂಡುಬರುತ್ತಿದೆ ಎಂದು ಅವರು ಹೇಳಿದರು.

ಪಂಜಾಬ್ ಪೊಲೀಸರು ಅಂತಹ ಬೆದರಿಕೆಗಳನ್ನು ಎದುರಿಸಲು ತರಬೇತಿ ಪಡೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದರು. ಗಡಿ ಸಮಸ್ಯೆಯನ್ನು ನಿಭಾಯಿಸಲು ಅವರಿಗೆ ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್‌ನ ಸಹಾಯದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಭಯೋತ್ಪಾದಕರ ಉಪಟಳವಿದ್ದಾಗ ಸೇನೆ ಸಹಾಯ ಮಾಡುತ್ತಿತ್ತೇ ಹೊರತು ರಾಜ್ಯ ಸರ್ಕಾರದ ಕೆಲಸವನ್ನು ಯಾರೂ ವಹಿಸಿಕೊಂಡಿರಲಿಲ್ಲ ಎಂದು ತಸಿಂಗ್ ಹೇಳಿದರು. ಪಂಜಾಬ್‌ನಲ್ಲಿ ಶಾಂತಿಯನ್ನು ಕಾಪಾಡಲು ಬಿಎಸ್‌ಎಫ್‌ನ ನೆರವು ಅತ್ಯಗತ್ಯ, ರಾಜ್ಯವು ಕಠಿಣ ಸಮಯವನ್ನು ಎದುರಿಸುತ್ತಿದೆ ಮತ್ತು ಮತ್ತೆ ತೊಂದರೆಯಾಗುವುದನ್ನು ಯಾರೂ ಬಯಸುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.