ADVERTISEMENT

ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ನಿಧನ

ಏಜೆನ್ಸೀಸ್
Published 13 ಆಗಸ್ಟ್ 2018, 4:28 IST
Last Updated 13 ಆಗಸ್ಟ್ 2018, 4:28 IST
ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ
ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ   

ಕೋಲ್ಕತ್ತ:ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ (89) ಸೋಮವಾರ ನಿಧನರಾದರು.

ಮೂತ್ರಪಿಂಡ ಸಮಸ್ಯೆ ಚಿಕಿತ್ಸೆಗಾಗಿ ಆಗಸ್ಟ್‌ 8ರಂದು ಚಟರ್ಜಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.ಭಾನುವಾರ ಲಘು ಹೃದಯಾಘಾತವಾದ ಪರಿಣಾಮ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಎರಡು ತಿಂಗಳಿಂದ ಅವರಿಗೆ ಡಯಾಲಿಸಿಸ್‌ ನಡೆಸಲಾಗುತ್ತಿತ್ತು.

ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿ ಉಂಟಾಗಿದ್ದ ಆಘಾತದಿಂದ ಕಳೆದ ತಿಂಗಳಷ್ಟೇ ಚೇತರಿಸಿಕೊಂಡಿದ್ದಸೋಮನಾಥ ಚಟರ್ಜಿ ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.10 ಅವಧಿಗೆ ಸಂಸದರಾಗಿದ್ದ ಚಟರ್ಜಿ, ಸಿಪಿಎಂನ ಕೇಂದ್ರ ಸಮಿತಿ ಸದಸ್ಯರಾಗಿದ್ದರು. 2004ರಿಂದ 2009ರವರೆಗೆ ಲೋಕಸಭಾ ಸ್ಪೀಕರ್‌ ಆಗಿದ್ದರು.

ADVERTISEMENT

ಹೊರಗಿಟ್ಟ ಸಿಪಿಎಂ

1968ರಲ್ಲಿ ಸಿಪಿಎಂ ಸೇರಿದ್ದ ಚಟರ್ಜಿ ಅವರು ಪಕ್ಷದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. 10 ಬಾರಿ ಲೋಕಸಭಾ ಸದಸ್ಯರಾಗಿದ್ದ ಅವರು ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2004ರಲ್ಲಿ ಸ್ಪೀಕರ್‌ ಆಗಿ ಆಯ್ಕೆಯಾಗಿದ್ದರು.

ಯುಪಿಎ ಜತೆ ಮೈತ್ರಿ ಹೊಂದಿದ್ದ ಎಡರಂಗ,ಭಾರತ–ಅಮೆರಿಕ ಪರಮಾಣು ಒಪ್ಪಂದಕ್ಕೆವಿರೋಧ ವ್ಯಕ್ತಪಡಿಸಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆದಿತ್ತು. ಈ ಸಮಯದಲ್ಲಿ ಚಟರ್ಜಿ ಅವರು ಸ್ಪೀಕರ್‌ ಸ್ಥಾನ ತೊರೆದು, ವಿಶ್ವಾಸ ಮತ ಯಾಚನೆ ವೇಳೆ ಸರ್ಕಾರದ ವಿರುದ್ಧ ಮತ ಹಾಕುವಂತೆ ಸಿಪಿಎಂ ಆಗ್ರಹಿಸಿತ್ತು. ಆದರೆ, ಚಟರ್ಜಿ ಅವರು ರಾಜೀನಾಮೆ ನೀಡಲು ನಿರಾಕರಿಸಿ ಸ್ಫೀಕರ್‌ ಸ್ಥಾನದಲ್ಲಿ ಮುಂದುವರಿದರು. 2008ರಲ್ಲಿ ಸಿಪಿಎಂ ಅವರನ್ನು ಪಕ್ಷದಿಂದ ಹೊರಗಿಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.