
ಸೋಮನಾಥ (ಗುಜರಾತ್): ‘ಗುಜರಾತ್‌ನಲ್ಲಿ ಸೋಮನಾಥ ದೇವಾಲಯವನ್ನು ಪುನರ್‌ನಿರ್ಮಾಣ ಮಾಡಲು ಅಡ್ಡಿಪಡಿಸಿದ ಶಕ್ತಿಗಳು ಈಗಲೂ ಸಕ್ರಿಯವಾಗಿದ್ದು, ಇವರ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಸೋಮನಾಥ ದೇವಾಲಯದ ಮೇಲೆ ಮೊಹಮ್ಮದ್ ಘಜ್ನಿ ದಾಳಿ ನಡೆಸಿ ಒಂದು ಸಾವಿರ ವರ್ಷಗಳಾದ ಕರಾಳ ದಿನದ ಅಂಗವಾಗಿ ಭಾನುವಾರ ನಡೆದ ‘ಸೋಮನಾಥ ಪರ್ವ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಸೋಮನಾಥದ ಇತಿಹಾಸವು ನಾಶ ಹಾಗೂ ಸೋಲಿನದ್ದಲ್ಲ, ಗೆಲುವು ಹಾಗೂ ಪುನರ್ ನಿರ್ಮಾಣದ್ದಾಗಿದೆ. ಮೂಲಭೂತವಾದಿಗಳು ಇತಿಹಾಸದ ಚಕ್ರದ ಪುಟಗಳಿಗಷ್ಟೇ ಸೀಮಿತರಾಗಿದ್ದು, ಒಂದು ಸಾವಿರ ವರ್ಷದ ನಂತರವೂ ದೇವಾಲಯವು ಮತ್ತಷ್ಟು ಎತ್ತರದಲ್ಲಿ ನಿಂತಿದೆ’ ಎಂದು ಅವರು ತಿಳಿಸಿದ್ದಾರೆ.
‘ಹಲವು ಶತಮಾನ ದೇವಾಲಯವನ್ನು ವಿನಾಶಗೊಳಿಸುವ ಯತ್ನಗಳು ನಡೆದವು. ಆದರೂ ದೇವಾಲಯವು ಪುನರ್‌ನಿರ್ಮಾಣಗೊಂಡಿದ್ದು, ದೇಶದ ಹೆಮ್ಮೆಯ ಸಂಕೇತವಾಗಿ ಗುರುತಿಸಿಕೊಂಡಿದೆ. ಸಾಮೂಹಿಕ ಸಂಕಲ್ಪ ಹಾಗೂ ಪ್ರಾಚೀನ ವೈಭವವನ್ನು ಪುನರ್‌ಸ್ಥಾಪಿಸುವ ಮೇಲ್ಪಂಕ್ತಿಯಾಗಿ ನಿಂತಿದೆ’ ಎಂದು ತಿಳಿಸಿದ್ದಾರೆ.
‘ದ್ವೇಷ, ದೌರ್ಜನ್ಯ ಹಾಗೂ ಭಯೋತ್ಪಾದನೆಯಂತಹ ವಿಚಾರದಂತಹ ನೈಜ ಇತಿಹಾಸವನ್ನು ನಮ್ಮಿಂದ ಮುಚ್ಚಿಡಲಾಗಿತ್ತು. ಈ ದಾಳಿಯೂ ದೇವಾಲಯವನ್ನು ಲೂಟಿ ಮಾಡಲು ಎಂದು ನಮಗೆ ಪಾಠ ಕಲಿಸಲಾಯಿತು. ಸ್ವಾತಂತ್ರ್ಯ ಬಂದ ನಂತರ ಸರ್ದಾರ್ ವಲ್ಲಭಬಾಯಿ ಪಟೇಲ್ ಸೋಮನಾಥ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲು ಮುಂದಾದ ವೇಳೆ ಹಲವು ಅಡೆತಡೆಗಳು ಎದುರಾದವು. ತುಷ್ಟೀಕರಣದಲ್ಲಿ ತೊಡಗಿದ್ದ ಜನರು ಈ ಕೆಲಸಕ್ಕೆ ಅಡ್ಡಿಪಡಿಸಿದರು. ಈಗಲೂ ಅಂತಹ ಶಕ್ತಿಗಳು ಸಕ್ರಿಯವಾಗಿದ್ದು, ಅಂತಹವರನ್ನು ಮಣಿಸಬೇಕು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.