ADVERTISEMENT

ಗಡಿ ಕುರಿತ ಚರ್ಚೆಗೆ ನಿರಾಕರಣೆ: ಕೇಂದ್ರದ ವಿರುದ್ಧ ಸೋನಿಯಾ ವಾಗ್ದಾಳಿ

ಚೀನಾದ ಮಿಲಿಟರಿ ಹಗೆತನಕ್ಕೆ ಆರ್ಥಿಕ ನೆಲೆಯಲ್ಲಿ ಪ್ರತಿಕ್ರಿಯೆ ಏಕಿಲ್ಲ– ಕಾಂಗ್ರೆಸ್ ಪ್ರಶ್ನೆ

ಪಿಟಿಐ
Published 21 ಡಿಸೆಂಬರ್ 2022, 14:27 IST
Last Updated 21 ಡಿಸೆಂಬರ್ 2022, 14:27 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಸಂಸತ್ತಿನಲ್ಲಿ ಭಾರತ– ಚೀನಾ ಗಡಿ ಸಮಸ್ಯೆಯ ಚರ್ಚೆಯನ್ನು ನಿರಾಕರಿಸುವುದಕ್ಕಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಗಂಭೀರ ಕಾಳಜಿಯ ವಿಷಯಗಳ ಬಗೆಗಿನ ಮೌನವು ಈ ಸರ್ಕಾರದ ನಿರ್ಣಾಯಕ ಲಕ್ಷಣವಾಗಿರುವುದು ದುರದೃಷ್ಟಕರ’ ಎಂದು ಹೇಳಿದ್ದಾರೆ.

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಪಕ್ಷದ ಸಂಸದೀಯ ಸಭೆಯನ್ನುದ್ದೇಶಿಸಿ ಮಾತನಾಡಿದ ಸೋನಿಯಾ, ‘ಚೀನಾದ ಆಕ್ರಮಣಗಳಂತಹ ಗಂಭೀರ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯನ್ನು ನಿರಾಕರಿಸುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಅಗೌರವವನ್ನು ತೋರಿಸುತ್ತದೆ ಮತ್ತು ಇದು ಸರ್ಕಾರದ ದುರುದ್ದೇಶವನ್ನು ಪ್ರತಿಬಿಂಬಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ರಾಷ್ಟ್ರೀಯ ಭದ್ರತೆ ಮತ್ತು ಗಡಿ ಕುರಿತು ವಿಷಯಗಳನ್ನು ದೇಶದ ಜನರಿಗೆ ಮಾಹಿತಿ ನೀಡುವುದು ಹಾಗೂ ತನ್ನ ನೀತಿಗಳು ಹಾಗೂ ಕ್ರಮಗಳ ಕುರಿತು ವಿವರಿಸುವುದು ಸರ್ಕಾರದ ಕರ್ತವ್ಯವಾಗಿದೆ. ದೇಶವು ಮಹತ್ವದ ರಾಷ್ಟ್ರೀಯ ಸವಾಲನ್ನು ಎದುರಿಸುತ್ತಿರುವಾಗ, ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ದೇಶದ ಸಂಪ್ರದಾಯವಾಗಿದೆ. ಚರ್ಚೆಯು ದೇಶದ ನಿಲುವನ್ನು ಸ್ಪಷ್ಟಪಡಿಸುತ್ತದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ಅದಾಗ್ಯೂ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಗಡಿ ವಿಷಯದ ಕುರಿತು ಚರ್ಚಿಸಲು ಮೊಂಡುತನದಿಂದ ನಿರಾಕರಿಸುತ್ತದೆ.ಇದರ ಪರಿಣಾಮವಾಗಿ, ಸಂಸತ್ತು, ರಾಜಕೀಯ ಪಕ್ಷಗಳು ಮತ್ತು ಜನರು ನೈಜ ಪರಿಸ್ಥಿತಿಯ ಬಗ್ಗೆ ಅಜ್ಞಾನದಲ್ಲಿದ್ದಾರೆ.ಗಂಭೀರ ಕಾಳಜಿಯ ವಿಷಯಗಳ ಬಗ್ಗೆ ಮೌನವು ಈ ಸರ್ಕಾರದ ವಿಶಿಷ್ಟ ಲಕ್ಷಣವಾಗಿರುವುದು ದುರದೃಷ್ಟಕರ. ಪ್ರತಿಪಕ್ಷಗಳು ಸೇರಿದಂತೆ ಯಾವುದೇ ಪ್ರಶ್ನಿಸುವ ಧ್ವನಿಯನ್ನು ತಡೆಯುವಲ್ಲಿ ಸರ್ಕಾರವು ಪಾತ್ರ ವಹಿಸುತ್ತಿದೆ. ಅಷ್ಟೇ ಅಲ್ಲ, ಮಾಧ್ಯಮಗಳನ್ನು ಕೌಶಲದಿಂದ ನಿರ್ವಹಿಸುತ್ತಿದೆ. ಇದು ಕೇಂದ್ರ ಸರ್ಕಾರದಲ್ಲಿ ಮಾತ್ರವಲ್ಲದೇ, ಆ ಪಕ್ಷದ ಆಡಳಿತವಿರುವ ಎಲ್ಲ ರಾಜ್ಯಗಳಲ್ಲಿಯೂ ಇದೇ ರೀತಿಯ ಸ್ಥಿತಿ ಇದೆ’ ಎಂದು ಆರೋಪಿಸಿದ್ದಾರೆ.

‘ಮುಂದಿನ ದಿನಗಳಲ್ಲಿ ಚೀನಾದಿಂದ ಆಕ್ರಮಣವನ್ನು ತಡೆಯಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಚೀನಾದೊಂದಿಗೆ ವ್ಯಾಪಾರವನ್ನು ಭಾರತವು ಮುಂದುವರಿಸಿದ್ದು, ನಾವು ರಫ್ತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದೇವೆ. ಚೀನಾದ ಮಿಲಿಟರಿ ಹಗೆತನಕ್ಕೆ ಸರ್ಕಾರವು ಆರ್ಥಿಕ ನೆಲೆಯಲ್ಲಿ ಏಕೆ ಪ್ರತಿಕ್ರಿಯಿಸುತ್ತಿಲ್ಲ’ ಎಂದೂ ಸೋನಿಯಾ ಪ್ರಶ್ನಿಸಿದ್ದಾರೆ.

‘ನ್ಯಾಯಾಂಗದ ಸ್ಥಾನಕ್ಕೆ ಕುತ್ತು’: ಕೇಂದ್ರ ಸರ್ಕಾರವು ಸಾರ್ವಜನಿಕರ ದೃಷ್ಟಿಯಲ್ಲಿ ನ್ಯಾಯಾಂಗದ ಸ್ಥಾನಮಾನವನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡುತ್ತಿದೆ. ಇದು ನ್ಯಾಯಾಂಗದ ಸ್ಥಾನಕ್ಕೆ ಕುತ್ತುತರುವಂಥ ಹೊಸ ಬೆಳವಣಿಗೆಯಾಗಿದೆ’ ಎಂದೂ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.