ADVERTISEMENT

ಕೋವಿಡ್‌ ಲಸಿಕೆ ವೇಗ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ: ಸೋನಿಯಾ ಸೂಚನೆ

ಪಿಟಿಐ
Published 24 ಜೂನ್ 2021, 8:54 IST
Last Updated 24 ಜೂನ್ 2021, 8:54 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ದೇಶದಾದ್ಯಂತ ನಡೆಯುತ್ತಿರುವ ಲಸಿಕೆ ಅಭಿಯಾನದ ವೇಗದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು, ಕೋವಿಡ್‌ನ ಮೂರನೇ ಅಲೆ ಎದುರಿಸಲು ಅಗತ್ಯ ಸಿದ್ಧತೆಯಾಗಬೇಕು ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೂ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಬೇಕು. ಈ ವರ್ಷಾಂತ್ಯಕ್ಕೆ ಶೇ 75ರಷ್ಟು ಜನರಿಗೆ ಕೋವಿಡ್‌ ಲಸಿಕೆ ನೀಡುವಂತಾಗಬೇಕು. ಈ ಸಂಬಂಧ ಲಸಿಕೆ ನೀಡುವ ಪ್ರಕ್ರಿಯೆಯ ವೇಗ ಹೆಚ್ಚಿಸುವಂತೆ ಕೇಂದ್ರ ಸರ್ಕಾರದ ಮೇಲೆ ಪಕ್ಷದ ಕಾರ್ಯಕರ್ತರು ಒತ್ತಡ ಹೇರುವುದನ್ನು ಮುಂದುವರಿಸಬೇಕು‘ ಎಂದು ಕರೆ ನೀಡಿದರು.

‘ಲಸಿಕೆ ಪೂರೈಕೆ ಆಧಾರದ ಮೇಲೆಯೇ ಲಸಿಕೆ ನೀಡಿಕೆ ವೇಗ ಅವಲಂಬಿತವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಪಕ್ಷ ಒತ್ತಡ ಹಾಕಿದ್ದರಿಂದಲೇ ಕೇಂದ್ರ ಸರ್ಕಾರ ಲಸಿಕೆ ನೀಡಿಕೆಯ ವೇಗ ಹೆಚ್ಚಿಸಿದೆ. ಆ ಒತ್ತಡ ಹಾಕುವ ಪ್ರಕ್ರಿಯೆ ಮುಂದುವರಿಯಬೇಕು‘ ಎಂದು ಹೇಳಿದರು.

ADVERTISEMENT

‘ಲಸಿಕೆ ಹಾಕಿಸಿಕೊಳ್ಳಲು ನಡೆಯುತ್ತಿರುವ ನೋಂದಣಿ ವಿಷಯದಲ್ಲೂ ಪಕ್ಷದ ಕಾರ್ಯಕರ್ತರು ಗಮನಹರಿಸಬೇಕು. ಇದರಿಂದ ಲಸಿಕೆ ಹಾಕುವ ವೇಗ ಹೆಚ್ಚಿಸುವ ಜತೆಗೆ, ಲಸಿಕೆ ಹಾಳಾಗುವುದನ್ನೂ ಕಡಿತಗೊಳಿಸಬಹುದು‘ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.