ADVERTISEMENT

ಸಿಪಿಸಿ ನಾಯಕಿಯಾಗಿ ಸೋನಿಯಾ ಮರು ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 20:29 IST
Last Updated 1 ಜೂನ್ 2019, 20:29 IST
ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯಲ್ಲಿ ಸೋನಿಯಾ ಗಾಂಧಿ ಮಾತನಾಡಿದರು
ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯಲ್ಲಿ ಸೋನಿಯಾ ಗಾಂಧಿ ಮಾತನಾಡಿದರು   

ನವದೆಹಲಿ: ಕಾಂಗ್ರೆಸ್‌ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರು ಮರು ಆಯ್ಕೆಯಾಗಿದ್ದಾರೆ.

ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಶನಿವಾರ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಅವರ ಹೆಸರನ್ನು ಸೂಚಿಸಿದರು. ಕೇರಳದ ಮಾವೇಲಿಕರ ಕ್ಷೇತ್ರದ ಸಂಸದ ಕೆ. ಸುರೇಶ್‌ ಹಾಗೂ ಛತ್ತೀಸ್‌ಗಡದ ಕೊರ್ಬಾ ಕ್ಷೇತ್ರದ ಸಂಸದೆ ಜ್ಯೋತ್ಸ್ನಾ ಮಹಾಂತ್‌ ಅವರು ಅನುಮೋದಿಸಿದರು.

ಕಾಂಗ್ರೆಸ್‌ ನಿಯಮಾವಳಿಯ ಪ್ರಕಾರ, ಸಂಸದೀಯ ಪಕ್ಷದ ಅಧ್ಯಕ್ಷರಾದವರಿಗೆ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಕ್ಷದ ನಾಯಕನನ್ನು ಆಯ್ಕೆಮಾಡುವ ಅಧಿಕಾರವಿರುತ್ತದೆ.

ADVERTISEMENT

ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಸೋನಿಯಾ, ‘ತೀವ್ರ ಬಿಕ್ಕಟ್ಟಿನಲ್ಲೇ ಅಭೂತಪೂರ್ವ ಅವಕಾಶಗಳೂ ಹುದುಗಿರುತ್ತವೆ. ನಮ್ಮ ಸೋಲನ್ನು ಒಪ್ಪಿಕೊಂಡು, ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಆತ್ಮಸ್ಥೈರ್ಯ ಮತ್ತು ನಮ್ರತೆಯಿಂದ ಬಳಸಿಕೊಳ್ಳುವ ಹೊಣೆ ನಮ್ಮ ಮೇಲಿದೆ ಎಂದರು.

‘ಕಾಂಗ್ರೆಸ್‌ ಪಕ್ಷವು ಸಂಸತ್ತಿನಲ್ಲಿ ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುವುದು. ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಆಡಳಿತ ಪಕ್ಷದ ಮೇಲೆ ಕಾಂಗ್ರೆಸ್‌ ಒತ್ತಡ ಹೇರಲಿದೆ. ನಾವು ಹೊಸತನ ತುಂಬಿಕೊಂಡು ಕೆಲಸ ಮಾಡಬೇಕು ಎಂಬುದನ್ನು ಲೋಕಸಭಾ ಚುನಾವಣೆಯಲ್ಲಿ ಜನರು ನೀಡಿದ ತೀರ್ಪು ಸ್ಪಷ್ಟಪಡಿಸುತ್ತದೆ’ ಎಂದ ಅವರು, ‘ಮುಂಬರುವ ಎಲ್ಲಾ ಸವಾಲುಗಳನ್ನು ಎದುರಿಸಿ ನಾವು ಮತ್ತೆ ಮೇಲೆದ್ದು ಬರುತ್ತೇವೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

‘ಸೋಲಿನಿಂದ ಕುಗ್ಗದೆ, ರಾಜ್ಯಸಭೆಯಲ್ಲಿ ಸಮಾನ ಮನಸ್ಕ ಪಕ್ಷಗಳ ಜೊತೆ ಸೌಹಾರ್ದ ಸಂಬಂಧ ಇಟ್ಟುಕೊಂಡು ನಾವು ಮುನ್ನಡೆಯಬೇಕು’ ಎಂದು ಸಂಸದರಿಗೆ ಸೋನಿಯಾ ಸಲಹೆ ನೀಡಿದರು. ಪಕ್ಷದ ಎಲ್ಲಾ ಸಂಸದರು ಮತ್ತು ರಾಜ್ಯಸಭೆಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.