ADVERTISEMENT

ಕೋಲ್ಕತ್ತ ಸಾಮೂಹಿಕ ಅತ್ಯಾಚಾರ ಪ್ರಕರಣ: ಪ್ರಮುಖ ಆರೋಪಿ ಕೆಲಸದಿಂದ ಉಚ್ಚಾಟನೆ

ಸಾಮೂಹಿಕ ಅತ್ಯಾಚಾರ ಪ್ರಕರಣ: ಕಾಲೇಜು ಆಡಳಿತ ಮಂಡಳಿ ಕ್ರಮ

ಪಿಟಿಐ
Published 1 ಜುಲೈ 2025, 13:31 IST
Last Updated 1 ಜುಲೈ 2025, 13:31 IST
ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಕೋಲ್ಕತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ 
ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಕೋಲ್ಕತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ    

ಕೋಲ್ಕತ್ತ: ದಕ್ಷಿಣ ಕೋಲ್ಕತ್ತ ಕಾನೂನು ಕಾಲೇಜು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯನ್ನು ಕಾಲೇಜಿನ ಆಡಳಿತ ಮಂಡಳಿ ಕೆಲಸದಿಂದ ಉಚ್ಚಾಟಿಸಿದೆ. ಇತರ ಇಬ್ಬರು ಆರೋಪಿಗಳನ್ನೂ ಕಾಲೇಜಿನಿಂದ ಹೊರಹಾಕಲಾಗಿದೆ.

ಪ್ರಕರಣದ ಮುಖ್ಯ ಆರೋಪಿ ಮನೋಜಿತ್‌ ಮಿಶ್ರಾ, ಆಡಳಿತ ಮಂಡಳಿಯ ಈ ಹಿಂದಿನ ಶಿಫಾರಸಿನಂತೆ ಕಾಲೇಜಿನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿರುವ ಕಾರಣ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮಿಶ್ರಾ ಮತ್ತು ಬಂಧಿತರಾಗಿರುವ ಅದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಾದ ಪ್ರಮಿತ್ ಮುಖರ್ಜಿ ಹಾಗೂ ಝೈದ್‌ ಅಹ್ಮದ್‌ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. 

ADVERTISEMENT

ತೃಣಮೂಲ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ದೇವ್ ಅಧ್ಯಕ್ಷತೆಯಲ್ಲಿ ನಡೆದ ಕಾಲೇಜಿನ ಆಡಳಿತ ಮಂಡಳಿ ಸಭೆಯಲ್ಲಿ, ಮಿಶ್ರಾನನ್ನು ಕೆಲಸದಿಂದ ವಜಾಗೊಳಿಸುವ ಮತ್ತು ಇಬ್ಬರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಹಾಕುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಪ್ರಮುಖ ಆರೋಪಿ ಮಿಶ್ರಾ ಅಲಿಪೋರ್ ಪೊಲೀಸ್‌ ಹಾಗೂ ಸೆಷನ್ ಕೋರ್ಟ್‌ನಲ್ಲಿ ಕ್ರಿಮಿನಲ್‌ ಪ್ರಕರಣಗಳ ವಕೀಲನಾಗಿ ಕಾರ್ಯನಿರ್ವಹಿಸುತ್ತಿದ್ದು, ಆತನ ಸದಸ್ಯತ್ವವನ್ನು ರದ್ದುಪಡಿಸುವಂತೆ ಕೋರಿ ವಕೀಲರ ಸಂಘಕ್ಕೆ ಮನವಿ ಮಾಡಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ.

‘ಎಲ್ಲ ತರಗತಿಗಳನ್ನು ಅನಿರ್ದಿಷ್ಟಾವಧಿಯವರೆಗೆ ರದ್ದುಪಡಿಸಲಾಗುವುದು. ಆದರೆ ಮುಂಬರುವ ಪರೀಕ್ಷೆಗೆ ಯಾವುದೇ ಅಡಚಣೆ ಉಂಟಾಗದಂತೆ ಕ್ರಮವಹಿಸಲಾಗುವುದು’ ಎಂದಿದೆ.

ಕ್ಷಮೆಯಾಚಿಸಿದ ಮದನ್‌ ಮಿತ್ರಾ

ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಟಿಎಂಸಿ ಶಾಸಕ ಮದನ್‌ ಮಿತ್ರಾ ಅವರು ಪಕ್ಷದ ನಾಯಕತ್ವದ ಕ್ಷಮೆಯಾಚಿಸಿದ್ದಾರೆ.

‘ವಿದ್ಯಾರ್ಥಿನಿಯು ಒಬ್ಬಂಟಿಯಾಗಿ ಕಾಲೇಜಿಗೆ ಹೋಗದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಅಲ್ಲಿಗೆ ಹೋಗುವಾಗ ಸ್ನೇಹಿತರನ್ನು ಕರೆದೊಯ್ಯಬೇಕಿತ್ತು’ ಎಂದು ಮಿತ್ರಾ ಹೇಳಿದ್ದರು.

ಈ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಪಕ್ಷವು ಅವರಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿ ಮೂರು ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿತ್ತು. ಮಿತ್ರಾ ಅವರು ಶೋಕಾಸ್‌ ನೋಟಿಸ್‌ಗೆ ಸೋಮವಾರ ತಡರಾತ್ರಿ ಉತ್ತರಿಸಿದ್ದು ಕ್ಷಮೆಯಾಚಿದ್ದಾರೆ.

‘ಗುರುತು ಬಹಿರಂಗಪಡಿಸಿದರೆ ಕ್ರಮ’

ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಪಡಿಸುವ ಯಾವುದೇ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೋಲ್ಕತ್ತ ಪೊಲೀಸರು ಮಂಗಳವಾರ ಎಚ್ಚರಿಸಿದ್ದಾರೆ.

‘ಕೆಲವು ವ್ಯಕ್ತಿಗಳು ಪ್ರಕರಣಕ್ಕೆ ಸಂಬಂಧಿಸಿದ ಗೋಪ್ಯ ದಾಖಲೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಮೂಲಕ ಸಂತ್ರಸ್ತೆಯ ಗುರುತು ಬಹಿರಂಗಪಡಿಸಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಕಾನೂನಿನ ಉಲ್ಲಂಘನೆಯಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.