ADVERTISEMENT

ಸೀಟು ಹಂಚಿಕೆ ‘ಮಾಯಾ’ಜಾಲದಲ್ಲಿ ಅಖಿಲೇಶ್‌!

ಉತ್ತರ ಪ್ರದೇಶ ಮಹಾಮೈತ್ರಿ: ಬಿಎಸ್‌ಪಿ ಪಾಲಿಗೆ ಸುರಕ್ಷಿತ ಕ್ಷೇತ್ರ: ಎಸ್‌ಪಿ ಮುಂದಿದೆ ಕಠಿಣ ಸವಾಲು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 19:26 IST
Last Updated 22 ಫೆಬ್ರುವರಿ 2019, 19:26 IST
ಮಾಯಾವತಿ–ಅಖಿಲೇಶ್‌
ಮಾಯಾವತಿ–ಅಖಿಲೇಶ್‌   

ಲಖನೌ: ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಮೈತ್ರಿಕೂಟದ ಸ್ಥಾನ ಹೊಂದಾಣಿಕೆ ಮಾಯಾವತಿ ಅವರಿಗೆ ಹೆಚ್ಚು ಅನುಕೂಲಕರವಾಗಿರುವಂತೆ ಕಂಡುಬರುತ್ತಿದೆ.

ಉತ್ತರ ಪ್ರದೇಶದ ಬಹುತೇಕ ಗ್ರಾಮೀಣ ಮತ್ತು ಮುಸ್ಲಿಂ ಸಮುದಾಯ ಬಾಹುಳ್ಯವಿರುವ ‘ಸುರಕ್ಷಿತ’ ಲೋಕಸಭಾ ಕ್ಷೇತ್ರಗಳನ್ನು ಬಿಎಸ್‌ಪಿ ಉಳಿಸಿಕೊಂಡಿದೆ. ಬಿಜೆಪಿ ಪ್ರಭಾವವಿರುವ ನಗರ ಕೇಂದ್ರಿತ ಲೋಕಸಭಾ ಕ್ಷೇತ್ರಗಳನ್ನು ಸಮಾಜವಾದಿ ಪಕ್ಷಕ್ಕೆ ಬಿಟ್ಟು ಕೊಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತವರು ಕ್ಷೇತ್ರ ಗೋರಖಪುರ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಸ್ಪರ್ಧಿಸಲಿರುವ ಲಖನೌ ಲೋಕಸಭಾ ಕ್ಷೇತ್ರಗಳು ಸಮಾಜವಾದಿ ಪಕ್ಷದ ಪಾಲಿಗೆ ಬಂದಿವೆ. ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಬಲಾಡ್ಯವಾಗಿದ್ದು ಮಣಿಸುವುದು ಅಷ್ಟು ಸುಲಭದ ಮಾತಲ್ಲ.

ADVERTISEMENT

ಮುಸ್ಲಿಂ ಸಮುದಾಯ ಭಾರಿ ಸಂಖ್ಯೆಯಲ್ಲಿರುವ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಅಖಿಲೇಶ್‌ ಯಾದವ್‌ ಪಕ್ಷಕ್ಕೆ ಹೆಚ್ಚಿನ ಪಾಲು ದೊರೆತಿಲ್ಲ. ಇದರಿಂದ ಭವಿಷ್ಯದಲ್ಲಿ ಪಕ್ಷಕ್ಕೆ ರಾಜಕೀಯವಾಗಿ ಭರಿಸಲಾಗದ ನಷ್ಟವಾಗುವ ಸಾಧ್ಯತೆ ಇದೆ ಎಂದು ಸಮಾಜವಾದಿ
ಪಕ್ಷದ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಲಾಯಂ ಸಿಡಿಮಿಡಿ:ಈ ಎಲ್ಲ ರಾಜಕೀಯ ಬೆಳವಣಿಗೆ ಮತ್ತು ಲೆಕ್ಕಾಚಾರದಿಂದಾಗಿಯೇ ಎಸ್‌ಪಿ ಮುಖಂಡ ಮುಲಾಯಂ ಸಿಂಗ್‌ ಯಾದವ್‌ ಅವರು ಸೀಟು ಹಂಚಿಕೆ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಇದರಿಂದ ಸಮಾಜವಾದಿ ಪಕ್ಷಕ್ಕೆ ಹೆಚ್ಚಿನ ಲಾಭವಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಎಸ್‌ಪಿ 37 ಮತ್ತು ಬಿಎಸ್‌ಪಿ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಆರ್‌ಎಲ್‌ಡಿಗೆ ಮೂರು ಕ್ಷೇತ್ರ ನೀಡಲಾಗಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪರ್ಧಿಸುವ ರಾಯ್‌ ಬರೇಲಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರತಿನಿಧಿಸುವ ಅಮೇಠಿ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ಮೈತ್ರಿಕೂಟ ನಿರ್ಧರಿಸಿದೆ.

‘ಮುಸ್ಲಿಂ ಮತಬ್ಯಾಂಕ್‌ ಹಸ್ತಾಂತರ: ಎಸ್‌ಪಿ ಭವಿಷ್ಯಕ್ಕೆ ಮಾರಕ‘

ಆರಂಭದಿಂದಲೂ ಸಮಾಜವಾದಿ ಪಕ್ಷದ ಜತೆ ಗುರುತಿಸಿಕೊಂಡಿರುವ ಮುಸ್ಲಿಂ ಸಮುದಾಯದ ದೊಡ್ಡ ಮತಬ್ಯಾಂಕ್‌ ಅನ್ನು ಬಿಎಸ್‌ಪಿಗೆ ಬಿಟ್ಟು ಕೊಟ್ಟಂತಾಗಿದ್ದು, ಇದರಿಂದ ಸಮಾಜವಾದಿ ಪಕ್ಷದ ಭವಿಷ್ಯಕ್ಕೆ ಮಾರಕ ಪೆಟ್ಟು ಬೀಳಲಿದೆ ಎಂದು ಪಕ್ಷದ ನಾಯಕರು ಅಸಮಾಧಾನ ತೋಡಿಕೊಂಡಿದ್ದಾರೆ.

ಸ್ಥಾನ ಹೊಂದಾಣಿಕೆಯ ದೊಡ್ಡ ಲಾಭವನ್ನು ಮಾಯಾವತಿ ಪಡೆಯಲಿದ್ದಾರೆ. ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮತ್ತು ಎಸ್‌ಪಿ ಮೈತ್ರಿಕೂಟದಲ್ಲಿರುವ ಕಾರಣದಿಂದಾಗಿ ದಲಿತ ಮತಗಳ ಜತೆ ಹೆಚ್ಚುವರಿಯಾಗಿ ಮುಸ್ಲಿಮರ ಮತ್ತು ಜಾಟ್‌ ಸಮುದಾಯದ ಮತಗಳು ಬಿಎಸ್‌ಪಿಗೆ ಹೋಗಲಿವೆ ಎಂದು ಎಸ್‌ಪಿ ನಾಯಕರು ವಿಶ್ಲೇಷಿಸಿದ್ದಾರೆ.

ರಾಜ್ಯದ ಸಹರಾನಪುರ ಮತ್ತು ಮೀರಠ್‌ ವಿಭಾಗದಲ್ಲಿ ಸಮಾಜವಾದಿ ಪಕ್ಷಕ್ಕೆ ಒಂದೊಂದು ಕ್ಷೇತ್ರ ಬಿಟ್ಟು ಕೊಡಲಾಗಿದೆ. ಮೈತ್ರಿಕೂಟದಲ್ಲಿರುವ ರಾಷ್ಟ್ರೀಯ ನಿಶಾದ್‌ ಪಕ್ಷ ಮತ್ತು ಪೀಸ್‌ ಪಾರ್ಟಿಯಂತಹ ಚಿಕ್ಕಪುಟ್ಟ ಪಕ್ಷಗಳಿಗೆ ಅಖಿಲೇಶ್‌ ಯಾದವ್‌ ತಮಗೆ ದೊರೆತ ಸೀಟುಗಳಲ್ಲಿಯೇ ಪಾಲು ನೀಡಬೇಕಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ ಎದುರು ಅಸಮಾಧಾನ ತೋಡಿಕೊಂಡಿದ್ದಾರೆ.

ವಾಕ್‌ಚಾತುರ್ಯ

ಗೋರಕ್ಷಣೆ ಹೆಸರಿನಲ್ಲಿ ಅವರು (ಬಿಜೆಪಿಯವರು) ವದಂತಿ ಹರಡುತ್ತಾರೆ. ಸಿಆರ್‌ಪಿಎಫ್‌ನ 40 ಯೋಧರ ಹತ್ಯೆಯನ್ನು ರಾಜಕಾರಣಕ್ಕೆ ಎಳೆದು ತರುತ್ತಾರೆ. ಮಕ್ಕಳ ಅಪಹರಣದ ಸುಳ್ಳು ಸುದ್ದಿ ಹರಡುತ್ತಾರೆ, ಜನರನ್ನು ವಿಭಜಿಸುತ್ತಾರೆ. ಎಲ್ಲವೂ ರಾಜಕೀಯ ಲಾಭಕ್ಕಾಗಿ
- ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ

**

ಅವರ ಅಧಿಕಾರಾವಧಿಯಲ್ಲಿ ಏನು ಮಾಡಿದ್ದಾರೆ ಎಂಬುದನ್ನು ಹೇಳುವಂತೆ ರಾಹುಲ್‌–ಸ್ಟಾಲಿನ್‌ ಜೋಡಿಗೆ ಸವಾಲು ಹಾಕುತ್ತೇನೆ. ಈ ಬಗ್ಗೆ ಏನನ್ನೂ ಅವರು ಹೇಳಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಕಾಂಗ್ರೆಸ್‌–ಡಿಎಂಕೆಯದ್ದು ಭ್ರಷ್ಟಾಚಾರ ಮಾತ್ರ, ಅಭಿವೃದ್ಧಿ ಅಲ್ಲ. ಕಾಂಗ್ರೆಸ್‌– ಡಿಎಂಕೆ ಎಂದರೆ ಭ್ರಷ್ಟಾಚಾರ, ಬಿಜೆಪಿ ಎಂದರೆ ಅಭಿವೃದ್ಧಿ
- ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ (ತಮಿಳುನಾಡಿನಲ್ಲಿ ಪ್ರಚಾರ ಭಾಷಣ)

**

ಮಾತಿಗೆ ಬೆಲೆ ಇರಬೇಕು. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುತ್ತೇನೆ ಎಂದು ಹೇಳಿದವರು ಸಾಮಾನ್ಯ ಮನುಷ್ಯ ಅಲ್ಲ; ದೇಶದ ಪ್ರಧಾನಿಯಾದವರು ದೇಶದ ಎಲ್ಲರ ಪರವಾಗಿ ಮಾತನಾಡುತ್ತಾರೆ. ಅದು ಮನಮೋಹನ್‌ ಸಿಂಗ್‌ ಆಗಿದ್ದರೂ ಮೋದಿ ಆಗಿದ್ದರೂ ಅಷ್ಟೇ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ವಿಶೇಷ ಸ್ಥಾನಮಾನ ನೀಡುವುದನ್ನು ಯಾವ ಶಕ್ತಿಯೂ ತಡೆಯಲಾಗದು
- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

**

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಐದು ವರ್ಷ ಹಿಂದೆ ನರೇಂದ್ರ ಮೋದಿ ಅವರು ತಿರುಪತಿಯಲ್ಲಿ ಭರವಸೆ ಕೊಟ್ಟಿದ್ದರು. ಅದೇ ಸ್ಥಳದಲ್ಲಿ ರಾಹುಲ್‌ ಅವರು ಶುಕ್ರವಾರ ಅದೇ ಭರವಸೆ ಕೊಟ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಾವು ಸ್ಪರ್ಧಿಸುವ ಯಾವುದೇ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವುದಿಲ್ಲ. ಕಾಂಗ್ರೆಸ್‌ ಪಕ್ಷದ ಜತೆಗೆ ಎಡರಂಗ ಯಾವುದೇ ಹೊಂದಾಣಿಕೆ ಮಾಡುವುದನ್ನು ಒಪ್ಪುವುದೂ ಇಲ್ಲ.
- ದೇವವ್ರತ ಬಿಸ್ವಾಸ್‌, ಫಾರ್ವರ್ಡ್‌ ಬ್ಲಾಕ್‌ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.