ADVERTISEMENT

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಸ್‌ಪಿ, ಕಾಂಗ್ರೆಸ್, ಬಿಜೆಪಿ ವಿಫಲ: ಮಾಯಾವತಿ

ಪಿಟಿಐ
Published 3 ಜುಲೈ 2021, 10:30 IST
Last Updated 3 ಜುಲೈ 2021, 10:30 IST
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ   

ಲಖನೌ: ಹಿಂದಿನ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಸದ್ಯದ ಬಿಜೆಪಿ ಸರ್ಕಾರಗಳು ಉತ್ತರ ಪ್ರದೇಶದ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿವೆ ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿವೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಶನಿವಾರ ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 'ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ, ಸಮಾಜವಾದಿ ಪಕ್ಷ ಅಥವಾ ಸದ್ಯದ ಬಿಜೆಪಿ ಸರ್ಕಾರ ಪೊಲೀಸ್ ಮತ್ತು ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿವೆ ಮತ್ತು ಅವರಿಗೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಅವಕಾಶ ನೀಡಲಿಲ್ಲ. ಇದರ ಪರಿಣಾಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿವೆ' ಎಂದು ದೂರಿದ್ದಾರೆ.

ಹೊಸದಾಗಿ ನೇಮಕಗೊಂಡ ಡಿಜಿಪಿ ಮತ್ತು ಇತರ ಸರ್ಕಾರಿ ಅಧಿಕಾರಿಗಳನ್ನು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಸದ್ಯದ ಬಿಜೆಪಿ ಸರ್ಕಾರ ಅವಕಾಶ ನೀಡಬೇಕು ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ಮುಕುಲ್ ಗೋಯಲ್ ಅವರನ್ನು ಜೂನ್ 30 ರಂದು ಉತ್ತರ ಪ್ರದೇಶದ ಹೊಸ ಪೋಲಿಸ್ ಮಹಾನಿರ್ದೇಶಕರಾಗಿ (ಡಿಜಿಪಿ) ನೇಮಿಸಲಾಯಿತು.

ಮತ್ತೊಂದು ಟ್ವೀಟಿನಲ್ಲಿ, 'ಪಂಜಾಬ್‌ನಲ್ಲಿನ ಗಂಭೀರ ವಿದ್ಯುತ್ ಸಮಸ್ಯೆಯಿಂದಾಗಿ, ಸಾಮಾನ್ಯ ಜನ ಜೀವನ, ಕೈಗಾರಿಕೆಗಳು ಮತ್ತು ಕೃಷಿಯು ಗಂಭೀರ ಪರಿಣಾಮ ಎದುರಿಸುತ್ತಿದೆ. ಗುಂಪುಗಾರಿಕೆ, ಒಳಜಗಳದಿಂದ ಬಳಲುತ್ತಿರುವ ಕಾಂಗ್ರೆಸ್, ಸಾರ್ವಜನಿಕ ಹಿತಾಸಕ್ತಿ ಮತ್ತು ಕಲ್ಯಾಣದ ವಿಷಯಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ. ಜನರು ಇದನ್ನು ಅರಿತುಕೊಳ್ಳಬೇಕು' ಎಂದು ಆರೋಪಿಸಿದ್ದಾರೆ.

ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ತೊಡೆದುಹಾಕಲು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ-ಎಸ್ಎಡಿ ಮೈತ್ರಿಗೆ ಮತ ಚಲಾಯಿಸಬೇಕು ಎಂದು ಅವರು ಪಂಜಾಬ್ ಜನರನ್ನು ಒತ್ತಾಯಿಸಿದರು.

ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತು ಬಿಎಸ್‌ಪಿ 2022ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿವೆ. ಒಪ್ಪಂದದ ಭಾಗವಾಗಿ, ಬಿಎಸ್‌ಪಿ ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಮತ್ತು ಉಳಿದವುಗಳಲ್ಲಿ ಎಸ್ಎಡಿ ಸ್ಪರ್ಧಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.