ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್
ನೋಯ್ಡಾ/ಲಖನೌ: ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಯುವಕರ ಗುಂಪೊಂದು ಮುಸ್ಲಿಂ ಧರ್ಮಗುರು ಮೌಲಾನಾ ಸಾಜಿದ್ ರಶೀದಿ ಅವರ ಮೇಲೆ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಮಸೀದಿಗೆ ಭೇಟಿ ನೀಡಿದ್ದಕ್ಕಾಗಿ ಮಣಿಪುರದ ಮೈನ್‌ಪುರಿಯ ಸಂಸದೆ ಡಿಂಪಲ್ ಯಾದವ್ ವಿರುದ್ಧ ರಶೀದಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆ ನೋಯ್ಡಾದಲ್ಲಿ ಸುದ್ದಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ರಶೀದಿ ಹೋಗಿದ್ದರು. ಈ ವೇಳೆ ಯುವಕರ ಗುಂಪೊಂದು ರಶೀದಿ ಮೇಲೆ ಏಕಾಏಕಿ ಹಲ್ಲೆ ನಡೆಸಿದೆ. ಘಟನೆಯ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
‘ಮೌಲಾನಾ ರಶೀದಿ ಅವರಿಗೆ ಕಪಾಳಮೋಕ್ಷ ಮಾಡಿದ್ದೇವೆ. ದೇಶದ ಯಾವುದೇ ಮಹಿಳೆಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ನಾವು ಇದೇ ರೀತಿ ನಡೆದುಕೊಳ್ಳುತ್ತೇವೆ’ ಎಂದು ಸಮಾಜವಾದಿ ಪಕ್ಷದ ಯುವಜನ ಸಭಾದ ರಾಜ್ಯ ಕಾರ್ಯದರ್ಶಿ ಕುಲದೀಪ್ ಭಾಟಿ ‘ಎಕ್ಸ್’ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.
‘ಮೌಲಾನಾ ರಶೀದಿ ಅವರು ಸೆಕ್ಟರ್ 126 ಪೊಲೀಸ್ ಠಾಣೆಯಲ್ಲಿ ಕುಲದೀಪ್ ಭಾಟಿ, ಮೋಹಿತ್ ಮತ್ತು ಶ್ಯಾಮ್ ಸಿಂಗ್ ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.