ನವದೆಹಲಿ: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ರಾಜೀವ್ ಬ್ಯಾನರ್ಜಿ, ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಅಗತ್ಯವಿದೆ ಎಂದು ಹೇಳಿದರು.
ರಾಜೀವ್ ಬ್ಯಾನರ್ಜಿ ಸೇರಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಿಂದ ಬಂಡಾಯವೆದ್ದ ಪ್ರಮುಖ ನಾಯಕರು, ಶನಿವಾರದಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಾಯಕರು ಮಾತುಕತೆ ನಡೆಸಿದರು. ಬಳಿಕ ಸ್ವತಃ ಅಮಿತ್ ಶಾ ಅವರೇ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು.
ಪಶ್ಚಿಮ ಬಂಗಾಳದ ಜನರು ನಿರಾಸೆಗೊಂಡಿದ್ದಾರೆ ಎಂದು ನಾನು ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಿದ್ದೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆಯಾಗಬೇಕಿದೆ. ಯುವಕರಿಗೆ ಉದ್ಯೋಗ ದೊರಕಲು ಕೈಗಾರಿಕೆಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ರಾಜೀವ್ ಬ್ಯಾನರ್ಜಿ ತಿಳಿಸಿದರು.
ಬಂಗಾಳಕ್ಕೆ ವಿಶೇಷ ಪ್ಯಾಕೇಜ್ ಅಗತ್ಯವಿದೆ ಎಂದು ಕೂಡಾ ಹೇಳಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರಲು ಸಾಧ್ಯವಾದರೆ ಅದೊಂದು ಗೌರವ. ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಗಮನ ಕೇಂದ್ರಿಕರಿಸಲಿದ್ದೇವೆ ಎಂದು ಹೇಳಿದರು.
ಈ ಮೊದಲು ದೆಹಲಿ ಸ್ಫೋಟದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ಪಶ್ಚಿಮ ಬಂಗಾಳ ಪ್ರವಾಸ ರದ್ದುಗೊಂಡಿತ್ತು. ಇದರಿಂದಾಗಿ ವಿಶೇಷ ವಿಮಾನದ ಮೂಲಕ ಟಿಎಂಸಿ ಬಂಡಾಯ ನಾಯಕರನ್ನು ಶನಿವಾರ ಸಂಜೆಯೇ ನವದೆಹಲಿಗೆ ಬರಮಾಡಿಕೊಳ್ಳಲಾಯಿತು.
ಪಶ್ಚಿಮ ಬಂಗಾಳದ ಮಾಜಿ ಸಚಿವ ರಾಜೀವ್ ಬ್ಯಾನರ್ಜಿ ಜೊತೆಗೆ ಟಿಎಂಸಿಯಿಂದ ಉಚ್ಛಾಟನೆಯಾಗಿರುವ ಶಾಸಕಿ ವೈಶಾಲಿ ದಾಲ್ಮಿಯಾ, ಹೂಗ್ಲಿ ಜಿಲ್ಲೆಯ ಶಾಸಕ ಪ್ರಬೀರ್ ಘೋಶಾಲ್, ಹೌರಾದ ಮಾಜಿ ಮೇಯರ್ ರತಿನ್ ಚಕ್ರವರ್ತಿ, ಮಾಜಿ ಶಾಸಕ ಪಾರ್ಥ ಸಾರಥಿ ಚಟರ್ಜಿ ಹಾಗೂ ನಟ ರುದ್ರಾನಿಲ್ ಘೋಷಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.