USBRL, ಚೀನಾಬ್ ರೈಲು ಸೇತುವೆ
ಶ್ರೀನಗರ: ಜಮ್ಮುದಿಂದ ಕಾಶ್ಮೀರ ಸಂಪರ್ಕಿಸುವ ಹೊಸ ಯುಎಸ್‌ಬಿಆರ್‌ಎಲ್ ರೈಲು ಮಾರ್ಗ ಲೋಕಾರ್ಪಣೆಗೆ ಸಿದ್ದವಾಗಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ಜನರಿಗೆ ಪ್ರಯಾಣ ಸೌಲಭ್ಯದ ಹೊಸ ಅವಕಾಶ ಸಿಕ್ಕಂತಾಗಿದೆ. ಅಲ್ಲದೇ ಈ ಹೊಸ ಮಾರ್ಗ ಕಾಶ್ಮೀರವನ್ನು ಉಳಿದ ಭಾರತದ ಜೊತೆ ಬೆಸೆಯುವ ಕೊಂಡಿಯಾಗಿದೆ.
ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಯುಎಸ್‌ಬಿಆರ್‌ಎಲ್ (Udhampur-Srinagar-Baramulla Rail Link) ರೈಲು ಮಾರ್ಗ ಉದ್ಘಾಟನೆಗೆ ಸಿದ್ದವಾಗಿದ್ದು ಇದೇ ಏಪ್ರಿಲ್ 19 ರಂದು ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಅಂದು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಅವರು ಉದ್ಘಾಟಿಸಲಿದ್ದಾರೆ. ಅಲ್ಲದೇ ಅವರು ಕಾತ್ರಾದಿಂದ ಕಾಶ್ಮೀರವರೆಗೆ (Sangaldan ಸೆಕ್ಷನ್) ಇದೇ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.
ಇದರ ಪ್ರಯುಕ್ತ ಇಂದು ವಿಶೇಷ ವಂದೇ ಭಾರತ್ ರೈಲು ಜಮ್ಮು ವಲಯದ ಕಾತ್ರಾದ ಶ್ರೀ ಮಾತಾ ವೈಷ್ಣೋದೇವಿ ರೈಲ್ವೆ ನಿಲ್ದಾಣದಿಂದ (SVDK) ಕಾಶ್ಮೀರ ವಲಯದ ಶ್ರೀನಗರದ ಬುದ್‌ಗಾಮ್ ರೈಲ್ವೆ ನಿಲ್ದಾಣದ ತನಕ ಯಶಸ್ವಿ ಪ್ರಯೋಗಾರ್ಥ ಸಂಚಾರವನ್ನು ಪೂರ್ಣಗೊಳಿಸಿತು. ಪ್ರಯೋಗಾರ್ಥ ಸಂಚಾರ ಇದು ಎರಡನೇ ಬಾರಿ ಯಶಸ್ವಿಯಾಗಿದೆ.
ಪ್ರಯೋಗಾರ್ಥ ಸಂಚಾರದಲ್ಲಿ ರೈಲು ಯಾವುದೇ ಅಡೆತಡೆ ಇಲ್ಲದೇ ಪ್ರಪಂಚದ ಅತಿ ಎತ್ತರದ ಚೀನಾಬ್ ರೈಲ್ ಸೇತುವೆಯನ್ನು ಹಾಗೂ ಅಂಜಿ–ಖಾಡ್ ಕೇಬಲ್ ರೈಲ್ ಸೇತುವೆಯನ್ನು ದಾಟಿತು. ಏಪ್ರಿಲ್ 19ರಂದೇ ಚೀನಾಬ್ ರೈಲ್ ಸೇತುವೆಯನ್ನೂ ಪ್ರಧಾನಿ ಅವರು ಉದ್ಘಾಟಿಸಲಿದ್ದಾರೆ.
ಇದು ಜಮ್ಮು ಕಾಶ್ಮೀರಕ್ಕೆ ಸಿಕ್ಕ ಮೊದಲ ವಂದೇ ಭಾರತ್ ರೈಲು. ಅಲ್ಲಿನ ಹವಾಗುಣವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಈ ವಂದೇ ಭಾರತ್ ವಿಶೇಷ ರೈಲನ್ನು ಅಭಿವೃದ್ಧಿಪಡಿಸಲಾಗಿದೆ.
ದೇಶದ 136 ವಂದೇ ಭಾರತ್ ರೈಲುಗಳಲ್ಲಿ ಜಮ್ಮು ಕಾಶ್ಮೀರದ ವಂದೇ ಭಾರತ್ ರೈಲನ್ನು ಅತ್ಯಂತ ವಿಶೇಷವಾಗಿ ಹಾಗೂ ವಿಭಿನ್ನ ಬಣ್ಣದಲ್ಲಿ ತಯಾರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ವಿವರಿಸಿದ್ದಾರೆ.
ಚೀನಾಬ್ ರೈಲು ಸೇತುವೆ USBRL ಅನ್ನು ಭಾರತದ ಎಂಜಿನಿಯರಿಂಗ್ ಅದ್ಭುತ ಎಂದು ಬಣ್ಣಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.