-ಪಿಟಿಐ ಚಿತ್ರ
ಕೊಲಂಬೊ: ಮಾನವೀಯ ಮನೋಭಾವದೊಂದಿಗೆ ತೊಂದರೆಗೊಳಗಾದ ಮೀನುಗಾರರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ ಒಂದು ದಿನದ ನಂತರ, ಶ್ರೀಲಂಕಾ ಭಾನುವಾರ ಕನಿಷ್ಠ 11 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ.
ಪ್ರಧಾನಿ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ನಡುವಿನ ಶನಿವಾರದ ಮಾತುಕತೆಯ ಸಂದರ್ಭದಲ್ಲಿ ಮೀನುಗಾರರ ಸಮಸ್ಯೆ ಪ್ರಮುಖವಾಗಿ ಪ್ರಸ್ತಾಪವಾಗಿತ್ತು.
ನಾವು ಮೀನುಗಾರರ ಜೀವನೋಪಾಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚಿಸಿದ್ದೇವೆ. ಈ ವಿಷಯದಲ್ಲಿ ಮಾನವೀಯ ಮನೋಭಾವದಿಂದ ಮುಂದುವರಿಯಬೇಕು ಎಂದು ಪರಸ್ಪರ ಒಪ್ಪಿಕೊಂಡಿದ್ದೇವೆ ಎಂದು ದಿಸಾನಾಯಕೆ ಅವರನ್ನು ಭೇಟಿಯಾದ ನಂತರ ಮೋದಿ ತಮ್ಮ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದರು.
ನಾವು ಮೀನುಗಾರರು ಮತ್ತು ಅವರ ದೋಣಿಗಳನ್ನು ತಕ್ಷಣ ಬಿಡುಗಡೆ ಮಾಡುವ ಬಗ್ಗೆಯೂ ಒತ್ತು ನೀಡಿದ್ದೇವೆ ಎಂದೂ ಅವರು ಹೇಳಿದ್ದರು.
ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಮೀನುಗಾರರ ಸಮಸ್ಯೆ ಕುರಿತಂತೆ ಎರಡೂ ಕಡೆಯವರು ವಿವರವಾಗಿ ಚರ್ಚಿಸಿದ್ದಾರೆ ಎಂದು ಹೇಳಿದ್ದರು.
ಕನಿಷ್ಠ 11 ಭಾರತೀಯ ಮೀನುಗಾರರನ್ನು ವಿಶೇಷ ಆದ್ಯತೆ ಮೇರೆಗೆ ಬಿಡುಗಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಮೀನುಗಾರರ ಸಮಸ್ಯೆ ಎರಡೂ ದೇಶಗಳ ನಡುವಿನ ಸಂಬಂಧಕ್ಕೆ ತೊಡಕಾಗಿದೆ. ಪಾಕ್ ಜಲಸಂಧಿಯಲ್ಲಿ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ಭಾರತೀಯ ಮೀನುಗಾರರ ಮೇಲೆ ಬಲಪ್ರಯೋಗ ಮಾಡಿರುವ ಹಲವು ಘಟನೆಗಳು ಈ ಹಿಂದೆ ನಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.