ADVERTISEMENT

ನೀಟ್, ಕ್ಷೇತ್ರ ಮರುವಿಂಗಡಣೆ ಸ್ಪಷ್ಟ ಉತ್ತರ ನೀಡಿ: ಸ್ಟಾಲಿನ್ ಆಗ್ರಹ

ಪಿಟಿಐ
Published 18 ಏಪ್ರಿಲ್ 2025, 14:27 IST
Last Updated 18 ಏಪ್ರಿಲ್ 2025, 14:27 IST
ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್   

ತಿರುವಳ್ಳೂರು (ತಮಿಳುನಾಡು): ‘ನೀಟ್’ ಪ್ರವೇಶ ಪರೀಕ್ಷೆ ಮತ್ತು ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆ ಕುರಿತು ರಾಜ್ಯದ ಜನರ ಪ್ರಶ್ನೆಗಳಿಗೆ ‘ಸ್ಪಷ್ಟ ಉತ್ತರ’ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಒತ್ತಾಯಿಸಿದರು.  

‘ಈ ವಿಷಯಗಳಲ್ಲಿ ತಕರಾರು ತೆಗೆಯುವ ಮೂಲಕ ಆಡಳಿತ ಪಕ್ಷ ಡಿಎಂಕೆ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ’ ಎಂಬ ಅಮಿತ್ ಶಾ ಅವರ ಟೀಕೆಯನ್ನು ಸ್ಟಾಲಿನ್‌ ಅವರು ತಳ್ಳಿಹಾಕಿದರು.

ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಅವರು ‘ನೀಟ್‌, ತ್ರಿಭಾಷಾ ಸೂತ್ರ, ವಕ್ಫ್‌ ತಿದ್ದುಪಡಿ ಕಾಯ್ದೆ ಅಥವಾ ಕ್ಷೇತ್ರ ಮರುವಿಂಗಡಣೆ ಹೀಗೆ ರಾಜ್ಯಗಳಿಗೆ ಬಾಧಕವಾಗುವ ವಿಷಯಗಳಿಗೆ ಸಂಬಂಧಿಸಿ ತಮಿಳುನಾಡು ಸ್ಪಷ್ಟವಾಗಿ ವಿರೋಧದ ಧ್ವನಿ ದಾಖಲಿಸಲಿದೆ’ ಎಂದರು.

ADVERTISEMENT

‘ತಮಿಳುನಾಡು ಎಲ್ಲ ರಾಜ್ಯಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದೆ. ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ. ಹಾಗಿದ್ದರೆ, ರಾಜ್ಯಗಳ ಹಕ್ಕುಗಳಿಗೆ ಹೋರಾಟ ನಡೆಸುವುದೇ ತಪ್ಪೆ‘ ಎಂದು ಸ್ಟಾಲಿನ್‌ ಪ್ರಶ್ನಿಸಿದರು. 

‘ತಮಿಳುನಾಡು ಎಂದಿಗೂ ದೆಹಲಿಗೆ ಮಣಿಯುವುದಿಲ್ಲ. ಪಕ್ಷಗಳನ್ನು ಒಡೆಯುವ ಬಿಜೆಪಿಯವರ ಕಾರ್ಯತಂತ್ರ ಎಂದಿಗೂ ತಮಿಳುನಾಡಿನಲ್ಲಿ ಫಲ ನೀಡುವುದಿಲ್ಲ‘ ಎಂದು ಸ್ಟಾಲಿನ್‌ ಸ್ಪಷ್ಟವಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.