ADVERTISEMENT

ಮಗಳ ಮನೆಯಲ್ಲಿ ಐ.ಟಿ ಶೋಧ ಮೋದಿ ವಿರುದ್ಧ ಸ್ಟಾಲಿನ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 19:31 IST
Last Updated 2 ಏಪ್ರಿಲ್ 2021, 19:31 IST
ಸೆಂತಾಮರೈ ಮನೆಯ ಮುಂದೆ ಭದ್ರತಾ ಸಿಬ್ಬಂದಿ
ಸೆಂತಾಮರೈ ಮನೆಯ ಮುಂದೆ ಭದ್ರತಾ ಸಿಬ್ಬಂದಿ   

ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಅವರ ಮಗಳು ಸೆಂತಾಮರೈ ಮತ್ತು ಅಳಿಯ ಶಬರೀಶನ್‌ ಅವರಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ಶುಕ್ರವಾರ ಶೋಧ ನಡೆಸಿದ್ದಾರೆ. ತಮಿಳುನಾಡು ವಿಧಾನಸಭೆಗೆ ಮತದಾನ ನಡೆಯಲು ನಾಲ್ಕು ದಿನಳಷ್ಟೇ ಇರುವಾಗ ಈ ವಿದ್ಯಮಾನ ನಡೆದಿದೆ. ಈ ಶೋಧವನ್ನು ಡಿಎಂಕೆ ಬಲವಾಗಿ ಖಂಡಿಸಿದೆ. ಶೋಧದ ಸಮಯಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಈಸ್ಟ್‌ ಕೋಸ್ಟ್‌ ರಸ್ತೆಯಲ್ಲಿರುವ ಸೆಂತಾಮರೈ ಅವರ ಮನೆ, ಶಬರೀಶನ್‌ ಅವರ ಸಂಸ್ಥೆಯ ಕಚೇರಿಗಳಲ್ಲಿ ಶೋಧ ನಡೆದಿದೆ. ಶೋಧ ಮುಂದುವರಿದಿದ್ದರೂ ಅಧಿಕಾರಿಗಳು ಈ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ.

ಚುನಾವಣೆ ಸಂದರ್ಭದಲ್ಲಿ ಡಿಎಂಕೆ ಮುಖಂಡರ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಎರಡನೇ ಶೋಧ ಇದು. ಪಕ್ಷದ ಮುಖಂಡ ಇ.ವಿ. ವೇಲು ಅವರಿಗೆ ಸೇರಿದ ಸ್ಥಳಗಳಲ್ಲಿಯೂ ಇತ್ತೀಚೆಗೆ ಶೋಧ ನಡೆದಿತ್ತು.

ADVERTISEMENT

‘ದುರುದ್ದೇಶಪೂರಿತ ಮತ್ತು ಪ್ರತೀಕಾರ’ದ ಶೋಧ ಇದು ಎಂದು ಕೆಲವು ರಾಜಕೀಯ ಪಕ್ಷಗಳು ಈ ಶೋಧವನ್ನು ಬಣ್ಣಿಸಿವೆ. ಹಾಗಾಗಿ, ಆದಾಯ ತೆರಿಗೆ ಇಲಾಖೆಯ ಶೋಧವು ವಿವಾದಕ್ಕೆ ಕಾರಣವಾಗಿದೆ.

ಶೋಧಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಪ್ರಧಾನಿ ವಿರುದ್ಧದ ವಾಗ್ದಾಳಿಯಲ್ಲಿ ಸ್ಟಾಲಿನ್‌ ಅವರೇ ಮುಂಚೂಣಿಯಲ್ಲಿದ್ದಾರೆ.

‘ಇದು ಡಿಎಂಕೆ ಎಂಬುದನ್ನು ಮೋದಿ ಅವರಿಗೆ ನೆನಪಿಸಲು ಬಯಸುತ್ತೇನೆ. ನಾನು ಕರುಣಾನಿಧಿ ಮಗ. ಇಂತಹ ದಮನಕಾರಿ ತಂತ್ರದಿಂದ ನನ್ನ ಬಗ್ಗಿಸಲಾಗದು. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನಾನು ಮೀಸಾವನ್ನೇ (ಆಂತರಿಕ ಸುರಕ್ಷತಾ ಕಾಯ್ದೆ) ಎದುರಿಸಿದ್ದೇನೆ’ ಎಂದು ಸ್ಟಾಲಿನ್‌ ಹೇಳಿದ್ದಾರೆ.

‘ನಿಮ್ಮ ಕಾಲಿಗೆ ಬೀಳಲು, ತಮಿಳುನಾಡಿನ ಹಕ್ಕುಗಳನ್ನು ಶರಣಾಗಿಸಲು ಡಿಎಂಕೆ ಎಂದರೆ ಎಐಎಡಿಎಂಕೆ ಅಲ್ಲ. ಸಚಿವರು ಮತ್ತು ಮಾಜಿ ಮುಖ್ಯ ಕಾರ್ಯದರ್ಶಿಯ ಮನೆಯಲ್ಲಿ ಕೇಂದ್ರದ ತನಿಖಾ ಸಂಸ್ಥೆಗಳ ಮೂಲಕ ಶೋಧ ನಡೆಸಿ ರಾಜ್ಯ ಸರ್ಕಾರಕ್ಕೆ ದಿಗಿಲು ಹುಟ್ಟಿಸುವ ಕೆಲಸವನ್ನು ಕೇಂದ್ರ ಮಾಡಿತ್ತು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.