ADVERTISEMENT

'ಸುಪ್ರೀಂ'ಗೆ ರಾಷ್ಟ್ರಪತಿ ಪ್ರಶ್ನೆ: ಬಿಜೆಪಿಯೇತರ CMಗಳಿಗೆ ಪತ್ರ ಬರೆದ ಸ್ಟಾಲಿನ್‌

ಪಿಟಿಐ
Published 19 ಮೇ 2025, 15:43 IST
Last Updated 19 ಮೇ 2025, 15:43 IST
ಸ್ಟಾಲಿನ್‌
ಸ್ಟಾಲಿನ್‌   

ಚೆನ್ನೈ : ಮಸೂದೆಗಳನ್ನು ಅಂಗೀಕರಿಸುವುದಕ್ಕೆ ರಾಜ್ಯಪಾಲ ಹಾಗೂ ರಾಷ್ಟ್ರಪತಿ ಅವರಿಗೆ ಕಾಲಮಿತಿ ನಿಗದಿ ಮಾಡಿದ ತೀರ್ಪಿನ ಬಗ್ಗೆ ರಾಷ್ಟ್ರಪತಿಯವರು ಸುಪ್ರೀಂ ಕೋರ್ಟ್‌ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ರಾಷ್ಟ್ರಪತಿ ಅವರ ಈ ನಡೆಯನ್ನು ವಿರೋಧಿಸಿ ಎಂದು ಆಗ್ರಹಿಸಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅವರು 8 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

‘ಮಸೂದೆಗಳನ್ನು ತಡೆಹಿಡಿಯಲಾಗುತ್ತಿರುವ ಬಗ್ಗೆ ನ್ಯಾಯಾಲಯ ಈಗಾಗಲೇ ವಿಚಾರಣೆ ನಡೆಸಿ, ತೀರ್ಪು ನೀಡಿದೆ. ಜೊತೆಗೆ, ಸುಪ್ರೀಂ ಕೋರ್ಟ್‌ನ ಸೂಚನೆಗಳನ್ನು, ಅದರ ಸೂಚನೆ ನೀಡುವ ಅಧಿಕಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸ್ಪಷ್ಟನೆಗಳು ಬೇಕಾಗಿವೆ. ಇದು ಈ ಸರ್ಕಾರದ ಕೆಟ್ಟ ಉದ್ದೇಶಗಳನ್ನು ತೋರಿಸುತ್ತದೆ’ ಎಂದು ಬಿಜೆಪಿಯೇತರ ಸರ್ಕಾರಗಳ ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಸ್ಟಾಲಿನ್‌ ಹೇಳಿದ್ದಾರೆ.

‘ನ್ಯಾಯಾಲಯದಲ್ಲಿ ವಾದಿಸಲು ನಾವೆಲ್ಲರೂ ಸೇರಿ ಕಾನೂನಾತ್ಮಕವಾದ ಕಾರ್ಯತಂತ್ರವೊಂದನ್ನು ರೂಪಿಸಬೇಕು. ಸಂವಿಧಾನದ ಮೂಲ ತತ್ವಗಳನ್ನು ರಕ್ಷಿಸುವುದಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ವೇದಿಕೆಯೊಂದನ್ನು ರೂಪಿಸಿಕೊಳ್ಳಬೇಕು. ಈ ವಿಚಾರದಲ್ಲಿ ನಿಮ್ಮ ತತ್‌ಕ್ಷಣದ ಮತ್ತು ವೈಯಕ್ತಿಕವಾದ ಭಾಗವಹಿಸುವಿಕೆಯನ್ನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.

ADVERTISEMENT

ಕರ್ನಾಟಕ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ತೆಲಂಗಾಣ, ಕೇರಳ, ಜಾರ್ಖಂಡ್‌, ಪಂಜಾಬ್‌ ಮತ್ತು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳಿಗೆ ಸ್ಟಾಲಿನ್‌ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.