ಎಂ.ಕೆ ಸ್ಟಾಲಿನ್
–ಪಿಟಿಐ ಚಿತ್ರ
ಚೆನ್ನೈ: ರೈಲ್ವೆ ಪ್ರಯಾಣದರ ಏರಿಕೆ ಮಾಡದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಒತ್ತಾಯಿಸಿದ್ದಾರೆ.
ಜುಲೈನಿಂದ ರೈಲು ಪ್ರಯಾಣಿಕರ ದರ ಏರಿಕೆಯಾಗಲಿದ್ದು, ಸಾಮಾನ್ಯ ಬೋಗಿಗಳ ಸಂಖ್ಯೆಯಲ್ಲಿನ ಇಳಿಕೆ ಜನರ ಸಂತೋಷವನ್ನು ಕಸಿದುಕೊಂಡಿದೆ ಎಂದು ಚೆನ್ನೈನಿಂದ ಕಟ್ಪಾಡಿಗೆ ರೈಲಿನಲ್ಲಿ ಪ್ರಯಾಣಿಸಿದ ಸ್ಟಾಲಿನ್ ಹೇಳಿದ್ದಾರೆ. ಇಲ್ಲಿನ ರೈಲು ನಿಲ್ದಾಣ ತಲುಪಿದಾಗ ತಮಗೆ ಆತ್ಮೀಯ ಸ್ವಾಗತ ನೀಡಿದ ಜನರೊಂದಿಗೆ ಸಂವಾದ ನಡೆಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಹವಾನಿಯಂತ್ರಿತ ಬೋಗಿಗಳನ್ನು ಹೆಚ್ಚಿಸಲು ಸಾಮಾನ್ಯ ರೈಲು ಬೋಗಿಗಳನ್ನು ಕಡಿಮೆ ಮಾಡುವ ಅಗತ್ಯವಿಲ್ಲ, ರೈಲು ಪ್ರಯಾಣ ದರಗಳನ್ನು ಸಹ ಹೆಚ್ಚಿಸುವ ಅಗತ್ಯವಿಲ್ಲ ಎಂದು ಸ್ಟಾಲಿನ್ ಪ್ರಧಾನಿ ಮೋದಿ ಮತ್ತು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.
ಮಧ್ಯಮ ವರ್ಗದ ಕುಟುಂಬಗಳು ಈಗಾಗಲೇ ಬೆಲೆ ಏರಿಕೆ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯ ವಿರುದ್ಧ ಹೋರಾಡುತ್ತಿವೆ. ರೈಲು ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ಅವರ ಕಳವಳಗಳನ್ನು ಮತ್ತಷ್ಟು ಹೆಚ್ಚಿಸಬಾರದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಭಾರತೀಯ ರೈಲ್ವೆ ಕೇವಲ ಒಂದು ಸೇವೆಯಲ್ಲ. ಅದೊಂದು ಕುಟುಂಬ! ಎಂದು ಬಣ್ಣಿಸಿದ್ದಾರೆ.
ಜುಲೈನಿಂದ ರೈಲು ಟಿಕೆಟ್ ದರ ತುಸು ಹೆಚ್ಚಳಕ್ಕೆ ಪ್ರಸ್ತಾವ
ಜುಲೈ 1ರಿಂದ ಅನ್ವಯವಾಗುವಂತೆ, ಮೇಲ್, ಎಕ್ಸ್‌ಪ್ರೆಸ್ ರೈಲುಗಳ ಎ.ಸಿ, ನಾನ್ ಎ.ಸಿ ಹಾಗೂ ಎರಡನೇ ದರ್ಜೆ ಪ್ರಯಾಣದ ಟಿಕೆಟ್ ದರಗಳನ್ನು ತುಸು ಹೆಚ್ಚಳ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ.
ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ನಾನ್ ಎ.ಸಿ ಪ್ರಯಾಣ ದರದಲ್ಲಿ ಪ್ರತಿ ಕಿ.ಮೀ.ಗೆ ಕನಿಷ್ಠ 1 ಪೈಸೆ ಹೆಚ್ಚಳ, ಎ.ಸಿ ದರ್ಜೆ ಪ್ರಯಾಣಕ್ಕೆ ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಿಸುವ ಪ್ರಸ್ತಾವ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಪನಗರ ರೈಲು, ಮಾಸಿಕ ಟಿಕೆಟ್ ದರಗಳಲ್ಲಿ ಯಾವುದೇ ಹೆಚ್ಚಳ ಇಲ್ಲ. ಎರಡನೇ ದರ್ಜೆ ಸಾಮಾನ್ಯ ಟಿಕೆಟ್‌ಗೆ ಸಂಬಂಧಿಸಿ 500 ಕಿ.ಮೀ.ವರೆಗಿನ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ. 500 ಕಿ.ಮೀ. ನಂತರ ಪ್ರತಿ ಕಿ.ಮೀ.ಗೆ ಅರ್ಧಪೈಸೆಯಷ್ಟು ಹೆಚ್ಚಳ ಮಾಡುವ ಪ್ರಸ್ತಾವ ಇದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.