ADVERTISEMENT

ಕ್ಷೇತ್ರ ಮರುವಿಂಗಡಣೆ: ಒಗ್ಗಟ್ಟಾಗಲು ಸ್ಟಾಲಿನ್‌ ಕರೆ

ಕರ್ನಾಟಕ ಸೇರಿ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಿಗೆ ಪತ್ರ ಬರೆದ ತಮಿಳುನಾಡು ಮುಖ್ಯಮಂತ್ರಿ

ಪಿಟಿಐ
Published 7 ಮಾರ್ಚ್ 2025, 16:01 IST
Last Updated 7 ಮಾರ್ಚ್ 2025, 16:01 IST
ಎಂ.ಕೆ. ಸ್ಟಾಲಿನ್‌
ಎಂ.ಕೆ. ಸ್ಟಾಲಿನ್‌   

ಚೆನ್ನೈ: ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆ ಸಂಬಂಧ ಅವಿರತ ಹೋರಾಟಕ್ಕೆ ತಮಿಳುನಾಡು ಜತೆಗೆ ಕೈಜೋಡಿಸುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಶುಕ್ರವಾರ ಕರ್ನಾಟಕ, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ, ಪಂಜಾಬ್‌, ಒಡಿಶಾ ಹಾಗೂ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮತ್ತು ಪಕ್ಷಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರ ನಡೆಸಲು ಹೊರಟಿರುವ, ಜನಸಂಖ್ಯಾ ಅನುಪಾತ ಆಧರಿಸಿದ ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯು ಅನ್ಯಾಯದ ಕಸರತ್ತು. ಇದರ ವಿರುದ್ಧ ರಾಜಿ ಇಲ್ಲದ ಹೋರಾಟ ನಡೆಸಬೇಕಿದೆ. ಇದಕ್ಕಾಗಿ ಜಂಟಿ ಕ್ರಿಯಾ ಸಮಿತಿಯ (ಜೆಎಸಿ) ಭಾಗವಾಗಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ದಕ್ಷಿಣದಲ್ಲಿ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಪೂರ್ವದಲ್ಲಿ ಒಡಿಶಾ, ಉತ್ತರದಲ್ಲಿ ಪಂಜಾಬ್ ಒಳಗೊಂಡ ಪ್ರಸ್ತಾವಿತ ಜೆಎಸಿಗೆ ಸೇರುವಂತೆ ಈ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಆಯಾ ಪಕ್ಷಗಳ ಮುಖಂಡರ ಔಪಚಾರಿಕ ಒಪ್ಪಿಗೆಯನ್ನು ಸ್ಟಾಲಿನ್ ಕೋರಿದ್ದಾರೆ. ಅಲ್ಲದೆ, ಜೆಎಸಿಯಲ್ಲಿ ಸೇವೆ ಸಲ್ಲಿಸಬಹುದಾದ ಮತ್ತು ಏಕೀಕೃತ ಕಾರ್ಯತಂತ್ರವನ್ನು ಸಂಘಟಿಸಲು ನೆರವಾಗುವ ಒಬ್ಬ ಹಿರಿಯ ಪ್ರತಿನಿಧಿಯನ್ನು ತಮ್ಮ ಪಕ್ಷಗಳಿಂದ ನಾಮನಿರ್ದೇಶನ ಮಾಡಬೇಕೆಂದು ಡಿಎಂಕೆ ಮುಖ್ಯಸ್ಥರೂ ಆದ ಅವರು ಪತ್ರದಲ್ಲಿ ಕೋರಿದ್ದಾರೆ.

ADVERTISEMENT

ಇದೇ 25ರಂದು ಚೆನ್ನೈನಲ್ಲಿ ನಡೆಯಲಿರುವ ಜೆಎಸಿ ಉದ್ಘಾಟನಾ ಸಭೆಯನ್ನು ಪ್ರಸ್ತಾಪಿಸಿರುವ ಅವರು, ‘ನಾವು ಪ್ರತ್ಯೇಕ ರಾಜಕೀಯ ಪಕ್ಷಗಳಾಗಿ ಅಲ್ಲ, ನಮ್ಮ ಜನರ ಭವಿಷ್ಯದ ರಕ್ಷಕರಾಗಿ ಒಟ್ಟಾಗಿ ನಿಲ್ಲೋಣ’ ಎಂದು ಕರೆಕೊಟ್ದಿದ್ದಾರೆ.

‘ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆಯ ನಿರ್ಣಯ ಪ್ರಕ್ರಿಯೆಯನ್ನು ಪರಿಗಣಿಸಲಾಗುತ್ತಿದೆ. ಅಲ್ಲದೆ, ಇದಕ್ಕೆ ಎರಡು ಸಂಭಾವ್ಯ ವಿಧಾನಗಳಿವೆ ಎಂದು ವರದಿಗಳು ಹೇಳುತ್ತಿವೆ. ಮೊದಲ ವಿಧಾನ: ಅಸ್ತಿತ್ವದಲ್ಲಿರುವ 543 ಸ್ಥಾನಗಳನ್ನು ರಾಜ್ಯಗಳ ನಡುವೆ ಮರುಹಂಚಿಕೆ ಮಾಡಬಹುದು ಮತ್ತು ಎರಡನೆ ವಿಧಾನ: ಒಟ್ಟು ಸ್ಥಾನಗಳ ಸಂಖ್ಯೆಯನ್ನು 800ಕ್ಕಿಂತಲೂ ಹೆಚ್ಚು ಮಾಡಬಹುದು. ಈ ಎರಡೂ ವಿಧಾನಗಳನ್ನು 2026ರ ಜನಸಂಖ್ಯೆ ಆಧರಿಸಿಯೇ ಮಾಡುವುದಾದರೆ, ಜನಸಂಖ್ಯೆ ನಿಯಂತ್ರಣವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಎಲ್ಲ ರಾಜ್ಯಗಳು ಗಣನೀಯ ಸಂಖ್ಯೆಯಲ್ಲಿ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳಲಿವೆ. ಜನಸಂಖ್ಯಾ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದಕ್ಕಾಗಿ ಮತ್ತು ರಾಷ್ಟ್ರೀಯ ಅಭಿವೃದ್ಧಿ ಗುರಿಗಳನ್ನು ಸಾಧಿಸಿದ್ದಕ್ಕಾಗಿ ನಾವು ಈ ರೀತಿ ದಂಡ ತೆರಬಾರದು’ ಎಂದು ಹೇಳಿದ್ದಾರೆ.

ಈ ಸಮಸ್ಯೆಯ ಗಂಭೀರತೆಯ ಹೊರತಾಗಿಯೂ ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿಲ್ಲ. ನಮ್ಮ ಕಳವಳಗಳನ್ನು ಪರಿಹರಿಸುವ ಯಾವುದೇ ನಿರ್ದಿಷ್ಟ ಬದ್ಧತೆಯನ್ನು ತೋರಿಲ್ಲ. ಕೇಂದ್ರದ ಪ್ರತಿನಿಧಿಗಳು ಈ ವಿಚಾರದಲ್ಲಿ ತೇಲಿಸಿ ಮಾತುಗಳನ್ನಾಡಿದ್ದಾರೆ. ಅಲ್ಲದೆ, ಯಾವುದೇ ರಾಜ್ಯವು ತನ್ನ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ ಎನ್ನುವ ಅವರ ಹೇಳಿಕೆಯು ಹುಸಿ ಭರವಸೆಯಂತಿದೆ ಎಂದು ಸ್ಟಾಲಿನ್‌ ವಾಗ್ದಾಳಿ ಮಾಡಿದ್ದಾರೆ.

‘ನಮ್ಮ ಪ್ರಜಾಪ್ರಭುತ್ವದ ಅಡಿಪಾಯವೇ ಅಪಾಯದಲ್ಲಿರುವಾಗ, ನಾವು ಅಂತಹ ಅಸ್ಪಷ್ಟ ಭರವಸೆಗಳನ್ನು ಸ್ವೀಕರಿಸಬಹುದೇ? ನಮ್ಮ ರಾಜ್ಯಗಳ ಭವಿಷ್ಯವೇ ಅತಂತ್ರ ಸ್ಥಿತಿಯಲ್ಲಿ ಸಿಲುಕಿದೆ. ಹೀಗಾಗಿ ಪಾರದರ್ಶಕವಾದ ಚರ್ಚೆಯನ್ನು ನಾವು ಬಯಸಬಾರದೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ಕ್ಷೇತ್ರ ಮರು ವಿಂಗಡಣೆ ಯೋಜನೆಯನ್ನು ಒಕ್ಕೂಟ ವ್ಯವಸ್ಥೆಯ ಮೇಲಿನ ಸ್ಪಷ್ಟ ದಾಳಿ ಎಂದು ಬಣ್ಣಿಸಿರುವ ಸ್ಟಾಲಿನ್‌, ಜನಸಂಖ್ಯಾ ನಿಯಂತ್ರಣ ಮತ್ತು ಉತ್ತಮ ಆಡಳಿತವನ್ನು ಖಾತ್ರಿಪಡಿಸಿದ ರಾಜ್ಯಗಳನ್ನು ಶಿಕ್ಷಿಸಲು, ಈ ಅನ್ಯಾಯ ಎಸಗಲು ನಾವು ಆಸ್ಪದ ನೀಡುವುದಿಲ್ಲ ಎಂದು ಗುಡುಗಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಿಂದಿ ಹೇರಿಕೆ ಒಪ್ಪಿಕೊಳ್ಳುವಂತೆ ಬೆದರಿಕೆ ಹಾಕುವ ಮೂಲಕ ರಾಜ್ಯವನ್ನು ಪ್ರಚೋದಿಸುತ್ತಿದ್ದಾರೆ. ಹಿಂದಿ ವಸಾಹತುಶಾಹಿಯನ್ನು ತಮಿಳುನಾಡು ಸಹಿಸುವುದಿಲ್ಲ.
–ಎಂ.ಕೆ. ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.