ADVERTISEMENT

ಜಾಗತಿಕ ಶ್ರವಣ-ದೃಶ್ಯ ಮನರಂಜನೆ ಶೃಂಗದಲ್ಲಿ ವರ್ಣರಂಜಿತ ‘ಅಲೆಗಳು’

ಕೀರವಾಣಿ ಸಂಗೀತದ ಶುಭಾರಂಭ | ಜಿಯೊ ಸೆಂಟರ್‌ನಲ್ಲಿ ತಾರೆಗಳ ತೋಟ

ವಿಶಾಖ ಎನ್.
Published 1 ಮೇ 2025, 19:54 IST
Last Updated 1 ಮೇ 2025, 19:54 IST
‘ವೇವ್ಸ್’ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದ ನಟಿ ಆಲಿಯಾ ಭಟ್, ನಿರ್ದೇಶಕ ಎಸ್‌.ಎಸ್. ರಾಜಮೌಳಿ ಹಾಗೂ ನಟ ಅಮೀರ್ ಖಾನ್  –ಪಿಟಿಐ ಚಿತ್ರ
‘ವೇವ್ಸ್’ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದ ನಟಿ ಆಲಿಯಾ ಭಟ್, ನಿರ್ದೇಶಕ ಎಸ್‌.ಎಸ್. ರಾಜಮೌಳಿ ಹಾಗೂ ನಟ ಅಮೀರ್ ಖಾನ್  –ಪಿಟಿಐ ಚಿತ್ರ   

ಮುಂಬೈ: ಎಂ.ಎಂ. ಕೀರವಾಣಿ ‘ವಸುಧೈವ ಕುಟುಂಬಕಂ‘ ಎನ್ನುವ ಸಾರ ಇರುವ ಹಾಡಿಗೆ ತಾವು ಮಾಡಿರುವ ಸ್ವರ ಸಂಯೋಜನೆಯನ್ನು ಪ್ರಸ್ತುತಪಡಿಸಿದ್ದೇ ಜೋರು ಕರತಾಡನ. ಅದಕ್ಕೆ ಚಿತ್ರಾ, ಶ್ರೇಯಾ ಘೋಷಾಲ್, ಮಂಗ್ಲಿ ಅವರ ಕಂಠದ ಗಾಯನ.

ಶಾರುಕ್ ಖಾನ್ ಕಾರ್ಯಕ್ರಮದ ಶುಭಾರಂಭ ಮಾಡಿದರೆ, ಅಮೀರ್ ಖಾನ್ ಕೊನೆಯಲ್ಲಿ ಪ್ರಧಾನಿ ಭಾಷಣಕ್ಕೆ ಇಂಬು ನೀಡಿದರು.

ಜಾಗತಿಕ ಶ್ರವಣ - ದೃಶ್ಯ ಮನರಂಜನೆ ಶೃಂಗ (ವೇವ್ಸ್) ಚಾಲನೆ ಪಡೆದ ಸುಮಾರು ಎರಡು ತಾಸಿನ ಸಮಾರಂಭದಲ್ಲಿ ಮನರಂಜನೆಯ ಒರತೆಯೇ ಇತ್ತು.

ADVERTISEMENT

ಮೋಹನ್ ಲಾಲ್, ಹೇಮಾ ಮಾಲಿನಿ, ಕಾರ್ತಿಕ್ ಆರ್ಯನ್, ರಣಬೀರ್ ಕಪೂರ್, ಅನಿಲ್ ಕಪೂರ್, ಭೂಮಿ ಪಿಡ್ನೇಕರ್, ನಾಗಾರ್ಜುನ ಆಗೀಗ ವೇದಿಕೆ ಮೇಲೆ ಬಂದು ಪಟಪಟನೆ ಔಚಿತ್ಯಕ್ಕೆ ತಕ್ಕಷ್ಟು ಮಾತನಾಡಿ, ಕಾರ್ಯಕ್ರಮವನ್ನು ಮುನ್ನಡೆಸಿದರು. ಒಬ್ಬರೇ ನಿರೂಪಕರು ಇಲ್ಲದೆ, ತಾರಾಗಣವನ್ನೇ ಒಗ್ಗೂಡಿಸಿ ಆ ಕೆಲಸ ನಿಭಾಯಿಸಿದ್ದು ಗಮನಾರ್ಹವಾಗಿತ್ತು.

ರಜನೀಕಾಂತ್ ಮೆಲುದನಿಯ ಮಾತು ಪ್ರಧಾನಿ ಮೋದಿ ಅವರ ಕುರಿತ ಹೊಗಳಿಕೆಗೆ ಸೀಮಿತವಾಯಿತು. ಅನಂತ ಕಥೆಗಳನ್ನು ಹೊಂದಿರುವ ನಮ್ಮ ದೇಶವು ಜಾಗತಿಕ ಮಟ್ಟದಲ್ಲಿ ಜಪಾನ್, ಅಮೆರಿಕ, ಚೀನಾ ದೇಶಗಳನ್ನು ಮನರಂಜನೆಯಲ್ಲಿ ಹಿಂದಿಕ್ಕಲು ‘ವೇವ್ಸ್’ ಚಿಮ್ಮುಹಲಗೆ ಆಗಲಿ ಎಂದು ನಿರ್ದೇಶಕ ಎಸ್.ಎಸ್‌. ರಾಜಮೌಳಿ ಹಾರೈಸಿದರು. ‘ಸಂಕಲ್ಪ’ ಎಂಬ ವಿಷಯ ಆಧರಿಸಿದ, ದೇಶದ ಹಲವು ನೃತ್ಯ ಪ್ರಕಾರಗಳನ್ನು ಒಗ್ಗೂಡಿಸಿದಂತಹ ಸಂಯೋಜಿತ ಪ್ರದರ್ಶನ ಚಿತ್ತಾಪಹಾರಿಯಾಗಿತ್ತು.

ಪಹಲ್ಗಾಮ್ ಘಟನೆಯ ನಂತರ ಈ ಶೃಂಗ ಮುಂದಕ್ಕೆ ಹೋಗಲಿದೆ ಎಂದು ಅನೇಕರು ಹೇಳಿದರು. ಆದರೆ, ನಮ್ಮ ಪ್ರಧಾನಿ ಒಬ್ಬ ಫೈಟರ್. ಇಲ್ಲಿಗೆ ಬಂದೇಬಿಟ್ಟರು.
ರಜನೀಕಾಂತ್, ನಟ

ಚಿತ್ರರಂಗಕ್ಕೆ ಕಾಣಿಕೆ ಸಲ್ಲಿಸಿ, ಈಗ ಅಗಲಿರುವ ಚೇತನಗಳಾದ ಗುರುದತ್, ರಾಜ್ ಖೋಸ್ಲಾ, ಸಲೀಲ್ ಚೌಧರಿ, ಪಿ.ಭಾನುಮತಿ ಹಾಗೂ ಋತ್ವಿಕ್ ಘಾಟಕ್ ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ವಿಶೇಷ ಅಂಚೆಚೀಟಿಗಳನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು.

ಅಕ್ಷಯ್ ಕುಮಾರ್, ಚಿರಂಜೀವಿ, ಮಿಥುನ್ ಚಕ್ರವರ್ತಿ, ವಿಜಯ್ ರಾಜ್, ವಿಕ್ಕಿ ಕೌಶಲ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ನಾಗ ಚೈತನ್ಯ ದಂಪತಿ ಮೊದಲಾದ ತಾರೆಗಳ ದಂಡೇ ನೆರೆದಿತ್ತು. ಕನ್ನಡದ ನಿರ್ದೇಶಕ ನಾಗಾಭರಣ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರೂ ಉದ್ಘಾಟನಾ ಸಮಾರಂಭದಲ್ಲಿ ಇದ್ದರು. ಉತ್ತರ ಭಾರತದ ನಟ–ನಟಿಯರಷ್ಟೇ ಅಲ್ಲದೆ ದಕ್ಷಿಣ ಭಾರತದ ನಟ ನಟಿಯರಿಗೂ ಸಮಪಾಲಿನ ಆಮಂತ್ರಣ ಇತ್ತೆನ್ನುವುದು ಸಮಾರಂಭದಲ್ಲಿ ಎದ್ದುಕಂಡಿತು. ಕನ್ನಡ ಚಿತ್ರರಂಗದವರ ಪ್ರಾತಿನಿಧ್ಯ ಮಾತ್ರ ಬೆರಳೆಣಿಕೆಯಷ್ಟಿತ್ತು.

ಮುಂಬೈನಲ್ಲಿ ಐಐಸಿಟಿ

ಮುಂಬೈನಲ್ಲಿ ₹400 ಕೋಟಿ ವೆಚ್ಚದಲ್ಲಿ ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೆಟಿವ್ ಟೆಕ್ನಾಲಜಿ-ಐಐಸಿಟಿ) ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದರು. ಐಐಟಿ ಮಾದರಿಯ ಈ ಸಂಸ್ಥೆಯು ಮನರಂಜನೆಗೆ ಪೂರಕವಾದ ಪ್ರತಿಭೆಗಳನ್ನು ರೂಪಿಸಲು ಅನುವು ಮಾಡಿಕೊಡಲಿದೆ. ಗೂಗಲ್ ರೀತಿಯ ಸಂಸ್ಥೆಗಳ ಸಹಭಾಗಿತ್ವ ಇದಕ್ಕೆ ಇರಲಿದೆ ಎಂದು ಹೇಳಿದರು. 

ಆರಂಭಿಕ ಗೋಷ್ಠಿಯ ಆಕರ್ಷಣೆ

ರಜನಿಕಾಂತ್ ಮೋಹನ್ ಲಾಲ್  ಮಿಥುನ್ ಚಕ್ರವರ್ತಿ ಹೇಮಾ ಮಾಲಿನಿ ಅವರನ್ನು ಒಳಗೊಂಡ ' ಮಹನೀಯರು ಹಾಗೂ ಮಹತ್ವ : ಭಾರತದ ಆತ್ಮ ರೂಪಿಸಿದ ಕಥೆಗಳು ' ಎಂಬ ವಿಷಯದ ಕುರಿತು ಮೊದಲ ಗೋಷ್ಠಿ ನಡೆಯಿತು. ಅಕ್ಷಯ್ ಕುಮಾರ್ ಅದನ್ನು ನಿರ್ವಹಿಸಿದ್ದು ವಿಶೇಷ.ಕಲಾತ್ಮಕ ಹಾಗೂ ಕಮರ್ಷಿಯಲ್ ಸಿನಿಮಾಗಳ ನಡುವಿನ ಗೆರೆಯನ್ನು ತೆಳುವಾಗಿಸುತ್ತಾ ಬಂದಿದ್ದೆ ಮಲಯಾಳ ಚಿತ್ರರಂಗದ ಏಳಿಗೆಗೆ ಕಾರಣ ಎಂದು ಮೋಹನ್ ಲಾಲ್ ಹೆಮ್ಮೆಯಿಂದ ಹೇಳಿದರು.

‘ಹೊರಗಿನ ವ್ಯಕ್ತಿಯಿಂದ ಉದ್ಯಮದ ನಾಯಕ–ನಾಯಕಿಯಾಗಿ ಬೆಳೆದ ಪಯಣ’ ಎಂಬ ವಿಷಯದ ಕುರಿತ ಗೋಷ್ಠಿಯು ಗುರುವಾರ ಮುಂಬೈನ ‘ವೇವ್ಸ್‌’ನಲ್ಲಿ ನಡೆಯಿತು. ನಟ ಶಾರುಕ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ತಂತಮ್ಮ ಬೆಳವಣಿಗೆಯ ಹಾದಿಯನ್ನು ನೆನಪಿಸಿಕೊಂಡರು.  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.