ADVERTISEMENT

ಕೊರೊನಾ ಆತಂಕ | 21 ಸಂಪೂರ್ಣ ದಿಗ್ಬಂಧನ: ಮೋದಿ ಖಡಕ್ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 15:35 IST
Last Updated 24 ಮಾರ್ಚ್ 2020, 15:35 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ದೇಶದಾದ್ಯಂತ ದಿನೇ ದಿನೆ ಹೆಚ್ಚುತ್ತಿರುವ ಕೊರೊನಾವೈರಸ್ ಸೋಂಕನ್ನು ತಡೆಯಲು ಇಂದು ಮಧ್ಯರಾತ್ರಿಯಿಂದಲೇ ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಇಂದು ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಜನರ ಮತ್ತು ಅವರ ಪರಿವಾರದವರ ರಕ್ಷಣೆಗಾಗಿ ಮುಂದಿನ 21 ದಿನಗಳ ವರೆಗೆ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗುತ್ತದೆ. ಈ ವೇಳೆ ಮನೆಮುಂದೆ ಲಕ್ಷ್ಮಣ ರೇಖೆಯನ್ನು ಹಾಕಿಕೊಂಡು ಇರಬೇಕು. ಅದನ್ನು ಯಾವುದೇ ಕಾರಣಕ್ಕೂ ದಾಟಬಾರದು. ಕೊರೊನಾ ಸೋಂಕಿತ ವ್ಯಕ್ತಿಯು ಬೀದಿಯಲ್ಲಿ ಕಾಣಿಸಿಕೊಂಡರೆ ತಕ್ಷಣ ಆತ ಸೋಂಕಿತ ಎಂದು ತಿಳಿಯುವುದಿಲ್ಲ. ಹಾಗಾಗಿ ಸುರಕ್ಷಿತವಾಗಿ ಮನೆಯಲ್ಲೇ ಇರಿ ಎಂದು ಮೋದಿ ತಿಳಿಸಿದರು.

ದೇಶದಲ್ಲಿ ನೀವು ಎಲ್ಲಿಯೇ ಇದ್ದರೂ ಅಲ್ಲಿಯೇ ಇರಿ. ಈ ಲಾಕ್‌ಡೌನ್ 21 ದಿನ ಇರುತ್ತೆ. ನೀವು ಹೊರಗೆ ಹೋಗುವುದನ್ನು ಮರೆತುಬಿಡಿ. ದೇಶ ಇಂದು ಮಹತ್ವಪೂರ್ಣ ನಿರ್ಣಯ ತೆಗೆದುಕೊಂಡಿದೆ. ಇಂದು ರಾತ್ರಿ 12 ಗಂಟೆಯಿಂದ ಪೂರ್ತಿ ದೇಶದಲ್ಲಿ ಲಾಕ್‌ಡೌನ್ ಘೋಷಿಸುತ್ತಿದ್ದೇನೆ. ಇದು ಕರ್ಫ್ಯೂ ಥರವೇ ಇರುತ್ತದೆ. ಕೊರೊನಾ ವಿರುದ್ಧ ಹೋರಾಡಲು ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತೇವೆ ಎಂದರು.

ADVERTISEMENT

ಕೊರೊನಾ ತಡೆಗೆ ಒಂದೇ ಮಂತ್ರ ಎಂದ ಅವರು ಪೋಸ್ಟರ್ ಪ್ರದರ್ಶಿಸಿದರು. ಕೊರೊನಾ ಎಂದರೆ ಯಾರೂ ಕೂಡ ರಸ್ತೆಗೆ ಇಳಿಯುವಂತಿಲ್ಲ ಎಂದು ಅರ್ಥ. (ಕೊರೊನಾ: ಕೋಯಿ ರೋಡ್ ಪರ್ ನಹಿ ನಿಕ್ಲೆ). ಇದು ಎಲ್ಲರಿಗೂ ಅನ್ವಯವಾಗುತ್ತದೆ. ಚೀನಾ, ಫ್ರಾನ್ಸ್, ಇಟಲಿ, ಅಮೆರಿಕ, ಇರಾನ್ ಸೇರಿದಂತೆ ಹಲವಾರು ರಾಷ್ಟ್ರಗಳು ಕೊರೊನಾದಿಂದ ಜರ್ಜರಿತವಾಗಿವೆ. ಇಟಲಿ ಮತ್ತು ಅಮೆರಿಕದಲ್ಲಿ ಅತ್ಯಾಧುನಿಕ ಸೌಲಭ್ಯದ ಆಸ್ಪತ್ರೆಗಳಿದ್ದರೂ ಕೂಡ ಕೋವಿಡ್-19 ತಡೆಗೆ ಹೋರಾಡುತ್ತಿವೆ. ಹೀಗಾಗಿ ನಮ್ಮ ದೇಶದ ದೃಷ್ಟಿಯಿಂದ ಇದು ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.