ADVERTISEMENT

ಮಾದಕವಸ್ತು: ಎನ್‌ಸಿಬಿಗೆ 25ಕ್ಕೂ ಹೆಚ್ಚು ಪ್ರಕರಣಗಳ ತನಿಖೆ ಹೊಣೆ

ಪಿಟಿಐ
Published 17 ಫೆಬ್ರುವರಿ 2022, 11:32 IST
Last Updated 17 ಫೆಬ್ರುವರಿ 2022, 11:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ಮಾದಕವಸ್ತು ಮಾರಾಟ ಕುರಿತ 25ಕ್ಕೂ ಹೆಚ್ಚು ‘ದೊಡ್ಡ’ ಪ್ರಕರಣಗಳ ತನಿಖೆಯ ಹೊಣೆಯನ್ನು ವಿವಿಧ ರಾಜ್ಯ ಸರ್ಕಾರಗಳು ಎನ್‌ಸಿಬಿಗೆ ವಹಿಸಿವೆ. ಮಾದಕವಸ್ತು ಜಾಲವನ್ನು ಬಯಲಿಗೆಳೆಯಲು ಸಮಗ್ರ ತನಿಖೆ ನಡೆಸಬೇಕು ಎಂದು ಕೋರಿವೆ.

ಅಂತರರಾಜ್ಯ, ಅಂತರರಾಷ್ಟ್ರೀಯ ಸಂಪರ್ಕಗಳನ್ನು ಗುರುತಿಸಿ, ಆರೋಪಿಗಳ ಪತ್ತೆಗೆ ಈಗಾಗಲೇ ಪರಿಣತ ಅಧಿಕಾರಿಗಳನ್ನು ತನಿಖೆಗೆ ನಿಯೋಜಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆಯಾದ ಎನ್‌ಸಿಬಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಧ್ಯಪ್ರದೇಶ, ಆಂಧ್ರಪ್ರದೇಶ, ದೆಹಲಿ ಮತ್ತು ಇನ್ನು ಕೆಲ ರಾಜ್ಯಗಳು ಮಾದಕವಸ್ತುಗಳಿಗೆ ಸಂಬಂಧಿಸಿದ ದೊಡ್ಡ ಪ್ರಕರಣಗಳನ್ನು ಗುರುತಿಸಿ, ಒಪ್ಪಿಸಿವೆ. ಇನ್ನು ಕೆಲವು ರಾಜ್ಯಗಳು ಈ ಕುರಿತು ಚರ್ಚೆ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಎನ್‌ಸಿಬಿಯ ಪ್ರಧಾನ ನಿರ್ದೇಶಕ ಸತ್ಯನಾರಾಯಣ ಪ್ರಧಾನ್‌ ಅವರು ಕಳೆದ ನವೆಂಬರ್ ತಿಂಗಳಲ್ಲಿ ವಿವಿಧ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದು, ಇತ್ಯರ್ಥವಾಗದ ದೊಡ್ಡ ಪ್ರಕರಣಗಳನ್ನು ಒಪ್ಪಿಸುವ ಕುರಿತು ಚಿಂತನೆ ನಡೆಸಬೇಕು ಎಂದು ಸಲಹೆ ಮಾಡಿದ್ದರು.

ಪತ್ರಕ್ಕೆ ಪ್ರತಿಯಾಗಿ ಸುಮಾರು 25 ಪ್ರಕರಣಗಳನ್ನು ವಿವಿಧ ರಾಜ್ಯಗಳು ತನಿಖೆಗೆ ಒಪ್ಪಿಸಿವೆ. ಈ ಕುರಿತು ತನಿಖೆಯನ್ನು ಎನ್‌ಸಿಬಿ ಆರಂಭಿಸಿದೆ. ಇನ್ನೂ 25ಕ್ಕೂ ಹೆಚ್ಚು ಪ್ರಕರಣಗಳನ್ನು ಒಪ್ಪಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದು ಪ್ರಧಾನ್‌ ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.